ನವದೆಹಲಿ: ಲೋಕಸಭಾ ಕಲಾಪದ ವೇಳೆ ಸಂಸತ್ ನೊಳಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಸಂಸತ್ ಭವನದ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
ಸಂಸತ್ ನೊಳಕ್ಕೆ ನುಗ್ಗಿದ ಇಬ್ಬರು ಯುವಕರಲ್ಲಿ ಒಬ್ಬಾತ ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ.
ಏತನ್ಮಧ್ಯೆ, ಇಬ್ಬರು ಆರೋಪಿಗಳು ಕರ್ನಾಟಕದ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಿ ವಿಸಿಟರ್ ಪಾಸ್ ಪಡೆದು ಸಂಸತ್ತಿಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಮತ್ತಿಬ್ಬರು ಸಂಸತ್ತಿನ ಹೊರಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ನಾಲ್ವರ ವಿಚಾರಣೆ ನಡೆಯುತ್ತಿದೆ. ಇವರಿಬ್ಬರೂ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಲೋಕಸಭೆಯ ವಿಸಿಟರ್ ಪಾಸ್ ಮೇಲೆ ಬಂದಿದ್ದರು ಎಂದು ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ.
ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಜಿಗಿದ್ದು ಹಳದಿ ಬಣ್ಣದ ಬಾಟಲ್ ಇದರಿಂದ ಅನಿಲ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಪ್ರತಾಪ್ ಸಿಂಹ(42) ಮೈಸೂರು ಬಿಜೆಪಿ ಸಂಸದ. 215-ಚಾಮುಂಡೇಶ್ವರಿ (ಕರ್ನಾಟಕ) ಕ್ಷೇತ್ರ, ಭಾಗ ಸಂಖ್ಯೆ 109 ರಲ್ಲಿ ಮತದಾರರಾಗಿ ಅವರ ಗುರುತು ಸಂಖ್ಯೆ 845 ಆಗಿದೆ. ಸಿಂಹ ಅವರು ವೃತ್ತಿಯಲ್ಲಿ ಪತ್ರಕರ್ತರು. ಅವರು ಕರ್ನಾಟಕದ ಯುವ ಮೋರ್ಚಾವಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರಾಗಿದ್ದಾರೆ.
ಮನೋರಂಜನ್ ತಂದೆ ಹೇಳೋದೇನು?
ಸಂಸತ್ ಭವನಕ್ಕೆ ನುಗ್ಗಿ ಗೊಂದಲ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿರುವ ಮನೋರಂಜನ್ ಮನೆಗೆ ಎಸಿಪಿ ಗಜೇಂದ್ರ ಪ್ರಸಾದ್, ವಿಜಯ್ ನಗರ ಇನ್ಸ್ ಪೆಕ್ಟರ್ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದಿದ್ದಾರೆ.
“ನನ್ನ ಮಗ ಬಿಇ ಓದಿದ್ದು, ದೆಹಲಿ-ಬೆಂಗಳೂರು ಅಂತ ಓಡಾಡುತ್ತಿರುತ್ತಾನೆ. ಆದರೆ ಆತ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಮನೋರಂಜನ್ ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಆತ 2014ರಲ್ಲಿ ಬಿಇ ಮುಗಿಸಿದ್ದ. ನಾನೊಬ್ಬ ರೈತ, ಆತ ಯಾಕಾಗಿ ಈ ರೀತಿ ಮಾಡಿದ್ದಾನೆ ಎಂಬುದು ಗೊತ್ತಿಲ್ಲ. ಆತ ತಪ್ಪು ಮಾಡಿದ್ದರೆ ಆತನನ್ನು ಗಲ್ಲಿಗೇರಿಸಲಿ ಎಂದು ತಂದೆ ಪ್ರತಿಕ್ರಿಯೆ ನೀಡಿದ್ದಾರೆ.