ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಯುವಕನೊಬ್ಬ ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾನೆ. ಇದರಿಂದ ಕಲಾಪಕ್ಕೆ ಅಡ್ಡಿಯಾಯಿತು.
ಇದರಿಂದ ಗೊಂದಲದ ವಾತಾವರಣ ಉಂಟಾಗಿ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸಂದರ್ಶಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್ ಗೆ ಜಿಗಿದು ಬೆಂಚುಗಳ ಮೇಲೆ ಘೋಷಣೆ ಕೂಗುತ್ತಾ ಇಬ್ಬರು ಹಾರುತ್ತಿರುವುದು ಕಂಡುಬಂದಿತು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳುವಂತೆ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಜಿಗಿದಿದ್ದಾರೆ. ಶೂನ್ಯ ವೇಳೆಯಲ್ಲಿ ಒಬ್ಬರು ಅಶ್ರುವಾಯು ಎರಚುತ್ತಾ ಸಾರ್ವಜನಿಕ ಗ್ಯಾಲರಿಯಿಂದ ಜಿಗಿದರೆ ಮತ್ತೊಬ್ಬ ಲೋಕಸಭೆಯ ಬೆಂಚುಗಳ ಮೇಲೆ ಹಾರುತ್ತಿರುವುದು ಕಂಡುಬಂದಿದೆ ಎಂದು ಚೌಧರಿ ಹೇಳಿದರು.
ಕೂಡಲೇ ಇಬ್ಬರು ವ್ಯಕ್ತಿಗಳ ಮೇಲೆ ಅಲ್ಲಿದ್ದ ಲೋಕಸಭಾ ಸದಸ್ಯರು ನಿಯಂತ್ರಿಸಲು ಹೋಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಲೋಕಸಭಾಧ್ಯಕ್ಷರ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರವಾಲ್ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಇದು ಭದ್ರತಾ ಉಲ್ಲಂಘನೆಯಾಗಿದೆ. ಇಂದು ನಾವು 2001 ರಲ್ಲಿ ನಡೆದ ಸಂಸತ್ತಿನ ದಾಳಿಯ 22ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.
ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, “ಇಬ್ಬರು ಯುವಕರು ಸಂಸತ್ತಿನ ಗ್ಯಾಲರಿಯೊಳಗಿನ ಡಬ್ಬಿಗಳಿಂದ ಹಳದಿ ಬಣ್ಣದ ಅನಿಲದ ದುರ್ವಾಸನೆ ಬೀರುತ್ತಾ ಬಂದರು” ಎಂದಿದ್ದಾರೆ.
ಅಲ್ಲಿದ್ದ ಸಂಸದರು ವ್ಯಕ್ತಿಗಳನ್ನು ಹಿಡಿಯಲು ನೋಡಿದರು. ಒಬ್ಬ ವ್ಯಕ್ತಿ ಕೆಲವು ಘೋಷಣೆಗಳನ್ನು ಕೂಗುತ್ತಿದ್ದ. ಇದು ಹೊಸ ಸಂಸತ್ ಕಟ್ಟಡದ ಭದ್ರತೆ ಬಗ್ಗೆ ಗಂಭೀರವಾಗಿ ಪ್ರಶ್ನೆ ಎತ್ತುವಂತೆ ಮಾಡುತ್ತದೆ ಎಂದರು.
ಮೊದಲ ವರದಿಯಂತೆ, ಮೈಸೂರು ಸಂಸದ ಪ್ರತಾಪ ಸಿಂಹ ಅವರ ಕಚೇರಿಯ ಮೂಲಕ ಸಂದರ್ಶಕರ ರಹದಾರಿ ಪತ್ರ ( ವಿಸಿಟರ್ ಪಾಸ್ ) ವನ್ನು ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇಬ್ಬರು ವಶಕ್ಕೆ: ಘಟನೆಗೆ ಸಂಬಂಧಿಸಿದಂತೆ ಕೂಡಲೇ ಪೊಲೀಸರು ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ. ಹಳದಿ ಬಣ್ಣದ ಹೊಗೆಯನ್ನು ಹೊರಸೂಸುವ ಕ್ಯಾನ್ ಗಳನ್ನು ಹೊತ್ತು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಓರ್ವ ಯುವಕ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.