ಬಳ್ಳಾರಿ: ಭಾರತ–ಪಾಕಿಸ್ತಾನ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಯುನೆಸ್ಕೋ ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಎಚ್ಚರಿಕೆ ವಹಿಸಿವೆ. ಹಂಪಿ ಸುತ್ತಮುತ್ತ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಪ್ರವೇಶ ಮಾರ್ಗಗಳಲ್ಲಿ ವಿಶೇಷ ತಪಾಸಣೆ ಜಾರಿಯಲ್ಲಿದೆ.
ಹಂಪಿಗೆ ಬರುವ ಪ್ರಮುಖ ರಸ್ತೆಗಳ ಮೇಲೆ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಈ ಪೈಕಿ ಎರಡು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ. ಹಂಪಿಯ ಪ್ರಸಿದ್ಧ ಕಲ್ಲಿನ ತೇರಿನ ಬಳಿ ಹಗಲು ಹೊತ್ತಿನಲ್ಲಿ ಒಂದು ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸಿಗರ ನಿರಂತರ ವೀಕ್ಷಣೆ ನಡೆಯುತ್ತಿದೆ.
ದೇಶ ಹಾಗೂ ವಿದೇಶಗಳಿಂದ ಆಗಮಿಸುವ ಎಲ್ಲ ಪ್ರವಾಸಿಗರ ವಸ್ತುಗಳ ತಪಾಸಣೆ ಹಾಗೂ ದೈಹಿಕ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ 4 ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯು ಗಸ್ತು ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಸ್ಥಳೀಯ ಪೊಲೀಸರು ಸುತ್ತಲೂ ನಿಯಮಿತ ಪಹರೆ ನೀಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವಾಲಯದಿಂದ ಮತ್ತು ರಾಜ್ಯ ಸರ್ಕಾರದಿಂದ ಸ್ಪಷ್ಟ ಸೂಚನೆ ದೊರೆತಿದ್ದು, ಹಂಪಿಯಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ಪತ್ತೆಹಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಸುರಕ್ಷತಾ ಕೊರತೆ ಎದುರಾಗದಂತೆ ದೃಢಪಡಿಸಲು ಸ್ಥಳೀಯ ಹಾಗೂ ಕೇಂದ್ರ ಭದ್ರತಾ ಸಿಬ್ಬಂದಿ ಜತೆಜತೆಗೇ ಕಾರ್ಯನಿರ್ವಹಿಸುತ್ತಿದ್ದಾರೆ.















