ಮೈಸೂರು: ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋಡೌನ್’ನಲ್ಲಿ ನಡೆದ ಅಗ್ನಿ ಅವಘಡದ ಬಳಿಕ ಮೈಸೂರು ನಗರ ಪೊಲೀಸರು ಪಟಾಕಿ ಗೋಡೌನ್ ಗಳ ಮೇಲೆ ನಿಗಾವಹಿಸಿದ್ದು, ಬಂಡಿಪಾಳ್ಯ ಬಳಿ ಸಂಗ್ರಹಿಸಿದ 20 ಲಕ್ಷ ರೂ. ಮೌಲ್ಯದ 4 ಸಾವಿರ ಕೆ.ಜಿ.ಯಷ್ಟು ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಡೀಪಾಳ್ಯ ಬಳಿ ಉತ್ತನಹಳ್ಳಿ ರಸ್ತೆಯಲ್ಲಿ ಗೋಡೌನ್ ಹೊಂದಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕ್ರಾಕರ್ಸ್ ಮಾಲೀಕ ಸಂತೋಷ್ (46) ಮತ್ತು ಅಲ್ಲಿನ ಉದ್ಯೋಗಿ ರಾಮನಹಳ್ಳಿಯ ಮನೋಜ್ (26) ಬಂದಿತರಾಗಿದ್ದಾರೆ.
ಈ ಗೋಡೌನ್ ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪಟ್ಟಾಗಿ ಸಂಗ್ರಹಿಸಲಾಗಿದೆ ಎಂದು ಬಾತ್ಮೀದಾರರಿಂದ ದೊರೆತ ಮಾಹಿತಿಯನ್ವಯ ಕೆ.ಆರ್.ಇನ್ಸ್ಪೆಕ್ಟರ್ ಎನ್.ಸಿ. ನಾಗೇಶ್ ಗೌಡ ಸಿಬ್ಬಂದಿಯೊಂದಿಗೆ ಅಕ್ಟೋಬರ್ 12 ರಂದು ಮಧ್ಯಾಹ್ನ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ.
ಈ ಗೋಡೌನ್ ನಲ್ಲಿ 600 ಕೆಜಿ ಅಷ್ಟು ಪಟಾಕಿ ಮಾತ್ರ ಸಂಗ್ರಹಿಸಲು ಅನುಮತಿ ಪಡೆದಿದ್ದು, 4000 ಕೆಜಿಯಷ್ಟು ಪಟಾಕಿ ಸಂಗ್ರಹಿಸುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಸಂತೋಷ ಮತ್ತು ಮನೋಜನನ್ನು ಬಂಧಿಸಿ, ಪಟಾಕಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.