ಮನೆ ಕಾನೂನು ಅಧಿಕ ಬೆಲೆಗೆ ಪಾನೀಯ ಮಾರಾಟ: ವಕೀಲರೊಬ್ಬರಿಗೆ ಪರಿಹಾರ ನೀಡುವಂತೆ ರೆಸ್ಟೋರೆಂಟ್‌ಗೆ ಸೂಚಿಸಿದ ತುಮಕೂರಿನ ಗ್ರಾಹಕ ಆಯೋಗ

ಅಧಿಕ ಬೆಲೆಗೆ ಪಾನೀಯ ಮಾರಾಟ: ವಕೀಲರೊಬ್ಬರಿಗೆ ಪರಿಹಾರ ನೀಡುವಂತೆ ರೆಸ್ಟೋರೆಂಟ್‌ಗೆ ಸೂಚಿಸಿದ ತುಮಕೂರಿನ ಗ್ರಾಹಕ ಆಯೋಗ

0

ಗರಿಷ್ಠ ಚಿಲ್ಲರೆ ಬೆಲೆಯನ್ನೂ (ಎಂಆರ್‌ಪಿ) ಮೀರಿ ಹೆಚ್ಚಿನ ಬೆಲೆಗೆ ನೀರಿನ ಬಾಟಲ್‌ ಮತ್ತು ತಂಪುಪಾನೀಯ ಮಾರಾಟ ಮಾಡಿದ್ದ ರೆಸ್ಟೋರೆಂಟ್‌ ದೂರು ನೀಡಿರುವ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಈಚೆಗೆ ಆದೇಶ ನೀಡಿದೆ.

ಗ್ರಾಹಕರೊಬ್ರರಿಗೆ ಮಾನಸಿಕ ಯಾತನೆ ಉಂಟು ಮಾಡಿದ್ದಕಾಗಿ ರೂ 4000 ಹಾಗೂ ಕಾನೂನು ಪ್ರಕ್ರಿಯೆ ವೆಚ್ಚದ  ರೂಪದಲ್ಲಿ ರೂ 3000 ಮೊತ್ತವನ್ನು ಹೋಟೆಲ್‌ನ ಗ್ರಾಹಕರಾದ ವಕೀಲ ನಂದೀಶ್‌ ಅವರಿಗೆ ಪ್ರಕರಣದ ಪ್ರತಿವಾದಿ ತುಮಕೂರಿನ ವೈಷ್ಣವಿ ಡಿಲಕ್ಸ್‌ ಕಂಫರ್ಟ್ಸ್‌ ಆದೇಶದ ಪ್ರತಿ ಪಡೆದ 30 ದಿನದೊಳಗೆ  ನೀಡಬೇಕು ಎಂದು ಆಯೋಗದ ಅಧ್ಯಕ್ಷೆ ಜಿ ಟಿ ವಿಜಯಲಕ್ಷ್ಮಿ ಆದೇಶದಲ್ಲಿ ತಿಳಿಸಿದ್ದಾರೆ.

ಕಾನೂನು ಮಾಪನ (ಪ್ಯಾಕ್‌ ಮಾಡಿದ ವಸ್ತುಗಳು) ನಿಯಮಾವಳಿ 2011ರ ಪ್ರಕಾರ ತಯಾರಕ, ಪ್ಯಾಕರ್‌, ಆಮದುದಾರ ಹಾಗೂ ಸಗಟು ಮಾರಾಟಗಾರರು ಸೇರಿದಂತೆ ಯಾವುದೇ ಚಿಲ್ಲರೆ/ಡೀಲರ್‌/ಇನ್ನಿತರ ವ್ಯಕ್ತಿ ಪ್ಯಾಕ್‌ ಆಗಿರುವ ವಸ್ತುಗಳಲ್ಲಿ ನಮೂದಿಸಲಾದ ನಿಗದಿತ ಚಿಲ್ಲರೆ/ಮಾರಾಟ ಬೆಲೆಗಿಂತಲೂ ಹೆಚ್ಚಿಗೆ ಹಣ ಸ್ವೀಕರಿಸುವಂತಿಲ್ಲ. ಈ ನಿಯಮ ಎಲ್ಲಾ ಚಿಲ್ಲರೆ/ಡೀಲರ್‌ ಹಾಗೂ ಇತರ ವ್ಯಕ್ತಿಗಳಿಗೂ ಅನ್ವಯವಾಗಲಿದ್ದು ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಇದಕ್ಕೆ ಹೊರತಲ್ಲ ಎಂದು ಆಯೋಗ ನುಡಿದಿದೆ.

ಮೇಲಿನ ನಿಯಮದ ದೃಷ್ಟಿಯಿಂದ ಎರಡು ಎಂಆರ್‌ಪಿಗಳು ಇರುವಂತಿಲ್ಲ ಮತ್ತು ಸೇವಾ ಪೂರೈಕೆದಾರರು ಎಂಆರ್‌ಪಿಗಿಂತಲೂ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ. ಹಾಗೆ ಮುದ್ರಿತ ಎಂಆರ್‌ಪಿಗಿಂತಲೂ ಹೆಚ್ಚಿನ ಶುಲ್ಕ ವಿಧಿಸುವುದು ರೆಸ್ಟೋರೆಂಟ್‌ನ ಅನ್ಯಾಯದ ವ್ಯಾಪಾರ ಕ್ರಮವಾಗುತ್ತದೆ ಎಂದು ಆಯೋಗ ತಿಳಿಸಿದೆ.

ಗ್ರಾಹಕರಾದ ನಂದೀಶ್‌ ನೀಡಿದ್ದ ಲೀಗಲ್ ನೋಟಿಸ್ ಮತ್ತು ಆಯೋಗ ನೀಡಿದ್ದ ನೋಟಿಸ್‌ ಸ್ವೀಕರಿಸಿದರೂ ರೆಸ್ಟೋರೆಂಟ್  ಆಯೋಗದ ಮುಂದೆ ಹಾಜರಾಗಲು ವಿಫಲವಾಗಿದೆ ಎಂದು ಕೂಡ ತಿಳಿಸಿದ ಆಯೋಗ ದಂಡ ವಿಧಿಸಿತು.

ರೆಸ್ಟೋರೆಂಟ್‌ಗೆ ನಿಯಮಿತವಾಗಿ ಭೇಟಿ ನೀಡಿ ಆಹಾರ ಸೇವಿಸುತ್ತಿದ್ದ ದೂರುದಾರರು 19 ಮೇ 2023ರಂದು ಆಹಾರ ಮತ್ತು ಪಾನೀಯಕ್ಕೆ ಆರ್ಡರ್‌ ಮಾಡಿದ್ದರು. ರೆಸ್ಟೋರೆಂಟ್‌ ತಂಪು ಪಾನೀಯ ಮತ್ತು ನೀರಿನ ಬಾಟಲ್‌ (ಶೀತಲೀಕರಿಸದ ಸಾಮಾನ್ಯ ಬಾಟಲ್‌) 5% ಜಿಎಸ್‌ಟಿ ಜೊತೆಗೆ ಎಂಆರ್‌ಪಿಗಿಂತಲೂ ಶೇ ೨೫ರಷ್ಟು ಅಧಿಕ ಬೆಲೆ ವಿಧಿಸಿದೆ ಎಂಬುದು ನಂದೀಶ್‌ ಅವರ ಆರೋಪವಾಗಿತ್ತು. ಉದ್ದೇಶಪೂರ್ವಕವಾಗಿ ಎರಡು ಶುಲ್ಕಗಳನ್ನು ವಿಧಿಸಲಾಗಿತ್ತು. ಇದು ಅನ್ಯಾಯದ ವ್ಯಾಪಾರ ಕ್ರಮ ಎಂದು ಅವರು ದೂರಿದ್ದರು.