ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತೀಥ್ಯ ಸ್ವೀಕರಿಸಿದ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಕಾರಾಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಮಿಷನರ್ ದಯಾನಂದ ಅವರು, ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಕೆಲವೊಂದು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಇಡೀ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಕಾರಾಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ದರ್ಶನ್ ಮತ್ತು ಗ್ಯಾಂಗ್ ವಿರುದ್ದ ಈ ಹಿಂದೆಯೂ ಕೆಲ ಸೌಲಭ್ಯಗಳು ಪಡೆದುಕೊಂಡಿರುವ ಕುರಿತು ಆರೋ ಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರವಷ್ಟೇ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆದರೆ, ಆ ಸಂದರ್ಭದಲ್ಲಿ ಕಾರಾಗೃದಲ್ಲಿ ಮೊಬೈಲ್ ಅಥವಾ ಇತರೆ ವಸ್ತುಗಳು ಕಂಡು ಬಂದಿರಲಿಲ್ಲ. ಇದೀಗ ದರ್ಶನ್ ಕೆಲವೊಂದು ಸೌಲಭ್ಯಗಳು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸೌಲಭ್ಯಗಳು ಇಲ್ಲದ ಕಡೆ ಸ್ಥಳಾಂತರ ಮಾಡುವಂತೆ ಕೋರಲಾಗಿದೆ. ಏಕೆಂದರೆ, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಇನ್ನು ಸಲ್ಲಿಕೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಇಂತಹ ಘಟನೆಗಳಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
3 ಎಫ್ಐಆರ್ ದಾಖಲು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ಕುರಿತು ಈಗಾಗಲೇ ಜೈಲಿನ ಡಿಐಜಿ ಸೋಮಶೇಖರ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಯಲ್ಲಿ 3 ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಬೇಗೂರು, ಹುಳಿಮಾವು ಠಾಣಾಧಿಕಾರಿಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗನ ಸಹಚರನಿಂದಲೇ ಫೋಟೋ ವೈರಲ್?:
ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ ಹಾಗೂ ಅವರ ಸಹಚರರು ಟೀ ಪಾರ್ಟಿ ಮಾಡುವ ಫೋಟೋವನ್ನು ನಾಗನ ಸಹಚರನೊಬ್ಬ ತನ್ನ ಮೊಬೈಲ್‌ನಿಂದ ತೆಗೆದಿದ್ದಾನೆ ಎಂದು ಹೇಳಲಾ ಗಿದೆ. ಆತನೇ ಫೋಟೋ ತೆಗೆದು, ನಾಗನ ಅಭಿಮಾನಿ ಬಳಗಕ್ಕೆ ಶೇರ್ ಮಾಡಿದ್ದು, ಇದೀಗ ಅದು ವೈರಲ್ ಆಗಿದೆ ಎಂದು ಹೇಳಲಾಗಿದೆ. ಇನ್ನು ನಟಿ ರಚಿತರಾಮ್ ಭೇಟಿಯಾದ ದಿನವೇ ಟೀ ಪಾರ್ಟಿ ನಡೆದಿರುವುದ ಹಲವು ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಲಾಗಿದೆ.