ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು(೭೨) ಅವರು ಅನಾರೋಗ್ಯದಿಂದ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್’ನಲ್ಲಿ ಇಡಲಾಗಿತ್ತು. ಶರತ್ ಬಾಬು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇತ್ತೀಚಿಗೆ ನಟ ಶರತ್ ಬಾಬು ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ನಟನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಬೆಂಗಳೂರಿನಿಂದ ಹೈದರಾಬಾದ್’ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಶರತ್ ಬಾಬು 1951ರ ಜುಲೈ 31ರಂದು ಶ್ರೀಕಾಕುಳಂ ಜಿಲ್ಲೆಯ ಅಮುದಲಾದಲ್ಲಿ ಜನಿಸಿದರು. ತೆಲುಗಿನ ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.














