ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರೈಸಿದ ಬಳಿಕ, ಹಿರಿಯ ಸಚಿವರು ತ್ಯಾಗ ಮನೋಭಾವದಿಂದ ಮುಂದಿನ ಹಂತದ ನಾಯಕರಿಗೆ ಅವಕಾಶ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಸೋಮವಾರ ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ವಿಧಾನಸಭೆ ಚುನಾವಣೆ ನಿಟ್ಟಿನಲ್ಲಿ ಪಕ್ಷವನ್ನು ಪುನರ್‌ಬಲಪಡಿಸುವ ಅಗತ್ಯವಿದೆ. “ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ, ಅಭಿವೃದ್ದಿ ಕಾಮಗಾರಿಗಳ ಜೊತೆಗೆ ಪಕ್ಷದ ಒಳಾಂಗಣ ಬಲವರ್ಧನೆ ಕೂಡ ಅತೀ ಅಗತ್ಯ. ಇದಕ್ಕಾಗಿ ಹಿರಿಯರು ರಾಜಕೀಯ ತ್ಯಾಗಕ್ಕೆ ಮುಂದಾಗಬೇಕು” ಎಂದು ಅವರು ಹೇಳಿದರು.
“ನಾನು ಈ ಮಾತು ಈಗ ಮೊದಲ ಬಾರಿಗೆ ಹೇಳುತ್ತಿಲ್ಲ. ಹಲವು ತಿಂಗಳ ಹಿಂದೆ, ಒಳ್ಳೆಯ ಉದ್ದೇಶದಿಂದಲೇ ಈ ವಿಚಾರವನ್ನು ಉನ್ನತ ಪದಾಧಿಕಾರಿಗಳಿಗೆ ತಿಳಿಸಿದ್ದೆ. ನಾನು ಈಗಲೂ ಅದೇ ನಿಲುವಿಗೆ ಬದ್ಧನಾಗಿದ್ದೇನೆ,” ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.
ಮುನಿಯಪ್ಪ ಅವರು ತಮ್ಮ ಮಾತಿನಲ್ಲಿ, “ಮುಂದಿನ ಹಂತದ ನಾಯಕರಿಗೆ ಅವಕಾಶ ನೀಡಿದರೆ ಮಾತ್ರ, ಪಕ್ಷದಲ್ಲಿ ನವ ಚೈತನ್ಯ ಬರುತ್ತದೆ. ಇದೀಗ ಮೂರು ಅಥವಾ ನಾಲ್ಕು ಬಾರಿ ಗೆದ್ದಿರುವ ಶಾಸಕರೂ ಸಚಿವ ಸ್ಥಾನ ಪಡೆಯದೇ ಇದ್ದಾರೆ. ಇಂತಹವರಿಗೆ ಅವಕಾಶ ಕಲ್ಪಿಸುವುದು ನ್ಯಾಯಸಮ್ಮತ” ಎಂದು ಹೇಳಿದರು.
ಆದರೆ, ಸಚಿವ ಸ್ಥಾನ ಅಥವಾ ಪಕ್ಷದ ಪ್ರಮುಖ ಸ್ಥಾನಗಳಿಗೆ ಬದಲಾವಣೆ ಮಾಡುವ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತವೆ ಎಂದು ಅವರು ಸ್ಪಷ್ಟಪಡಿಸಿದರು. “ನಾವು ಸಲಹೆ ನೀಡಬಹುದು, ಆದರೆ ತೀರ್ಮಾನ ಕೊನೆಗೆ ಕೇಂದ್ರೀಯ ನಾಯಕರದೇ ಎಂದರು.
ಕೆಪಿಸಿಸಿ ಹಾಗೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸ್ಪಷ್ಟನೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಥವಾ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಇತ್ತೀಚೆಗೆ ಸುದೀರ್ಘ ಕಾಲದಿಂದ ಹಲವು ಊಹಾಪೋಹಗಳು ನಡೆಯುತ್ತಿವೆ. ಈ ಕುರಿತು ಸ್ಪಷ್ಟನೆ ನೀಡಿದ ಮುನಿಯಪ್ಪ, “ಪಕ್ಷದ ಹೈಕಮಾಂಡ್ ಇಂಥ ಯಾವುದೇ ಬದಲಾವಣೆ ಕುರಿತ ತೀರ್ಮಾನ ಕೈಗೊಂಡಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ” ಎಂದು ತಿಳಿಸಿದರು.














