ಮನೆ ಕಾನೂನು ಹಿರಿಯ ನ್ಯಾಯವಾದಿಗಳು ಕಿರಿಯ ವಕೀಲರನ್ನುಆಳುಗಳಂತೆ ನಡೆಸಿಕೊಳ್ಳಬಾರದು: ಸಿಜೆಐ ಡಿ ವೈ ಚಂದ್ರಚೂಡ್

ಹಿರಿಯ ನ್ಯಾಯವಾದಿಗಳು ಕಿರಿಯ ವಕೀಲರನ್ನುಆಳುಗಳಂತೆ ನಡೆಸಿಕೊಳ್ಳಬಾರದು: ಸಿಜೆಐ ಡಿ ವೈ ಚಂದ್ರಚೂಡ್

0

ಹಿರಿಯ ನ್ಯಾಯವಾದಿಗಳು ಕಿರಿಯ ವಕೀಲರಿಗೆ ಉತ್ತಮ ವೇತನ ನೀಡಬೇಕು. ಹಾಗಾದಲ್ಲಿ ಮಾತ್ರ ಕಿರಿಯ ವಕೀಲರು ದೊಡ್ಡ ನಗರಗಳಲ್ಲಿ ಸಾಧಾರಣ ಜೀವನ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.

ಇತ್ತೀಚೆಗಷ್ಟೇ ಸಿಜೆಐ ಹುದ್ದೆಗೇರಿದ ನ್ಯಾ. ಚಂದ್ರಚೂಡ್ ಅವರಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಶನಿವಾರ  ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾವು ತಮ್ಮ ವೃತ್ತಿಯ ಆರಂಭಿಕ ಜೀವನದಲ್ಲಿ ಕಷ್ಟಪಟ್ಟು ವೃತ್ತಿ ಆರಂಭಿಸಿದೆವು ಎಂಬ ಒಂದೇ ಕಾರಣಕ್ಕೆ ಹಿರಿಯ ವಕೀಲರು ತಮ್ಮ ಕಿರಿಯರನ್ನು ಕೆಲಸದಾಳುಗಳಂತೆ ಪರಿಗಣಿಸಬಾರದು ಎಂದು ಅವರು ಹೇಳಿದರು. ಇದು ಕಾಲೇಜುಗಳಲ್ಲಿ ರ್ಯಾಗ್ ಮಾಡಿದವರನ್ನು ಕ್ಷಮಿಸಿದ್ದಕ್ಕೆ ಸಮನಾಗುತ್ತದೆ ಎಂದು ಅವರು ಹೇಳಿದರು.

 “ಬಹಳ ಹಿಂದಿನಿಂದಲೂ ನಾವು ನಮ್ಮ ವೃತ್ತಿಯ ಕಿರಿಯ ಸದಸ್ಯರನ್ನು ಕೆಲಸದಾಳುಗಳೆಂದು ಪರಿಗಣಿಸುತ್ತಿದ್ದೇವೆ ಏಕೆ? ಏಕೆಂದರೆ ನಾವು ಬೆಳೆದದ್ದೂ ಹೀಗೆಯೇ. ನಾವು ಹೀಗೆ ಬೆಳೆದೆವು ಎಂಬುದನ್ನು ಕಿರಿಯ ವಕೀಲರಿಗೆ ಸಮರ್ಥನೆಯಾಗಿ ಹೇಳಬಾರದು. ಹಾಗೆ ಹೇಳುವುದು ದೆಹಲಿ ವಿಶ್ವವಿದ್ಯಾಲಯದ ಹಳೆಯ ರ್ಯಾಗಿಂಗ್ ತತ್ವವಾಗಿತ್ತು. ಯಾರು ರ್ಯಾಗಿಂಗ್ಗೆ ತುತ್ತಾಗುತ್ತಾರೋ ಅವರು ತಮ್ಮ ಕೆಳಗಿನವರನ್ನು ರ್ಯಾಗ್ ಮಾಡಿ ರ್ಯಾಗಿಂಗ್ಗೆ ಈಡಾದ ಆಶೀರ್ವಾದವನ್ನು ವರ್ಗಾಯಿಸುತ್ತಿದ್ದರು. ಕೆಲವೊಮ್ಮ ಇದು ಬಹಳ ಕೆಟ್ಟದಾಗಿರುತ್ತಿತ್ತು. ನಾನೂ ಕೂಡ ಹೀಗೆ ಕಷ್ಟಪಟ್ಟು ಕಾನೂನು ಕಲಿತದ್ದು, ಹೀಗಾಗಿ ಕಿರಿಯ ವಕೀಲರಿಗೆ ನಾನು ವೇತನ ನೀಡುವುದಿಲ್ಲ ಎಂದು ಇಂದು ಹಿರಿಯರು ಹೇಳಬಾರದು. ಆ ಕಾಲ ತುಂಬಾ ಭಿನ್ನವಾಗಿತ್ತು. ಕುಟುಂಬಗಳು ಚಿಕ್ಕದಾಗಿರುತ್ತಿದ್ದವು, ಕುಟುಂಬದ ಸಂಪನ್ಮೂಲಗಳಿರುತ್ತಿದ್ದವು. ಉನ್ನತ ಸ್ಥಾನಕ್ಕೆ ಬರಬಹುದಾಗಿದ್ದ ಅನೇಕ ಕಿರಿಯ ವಕೀಲರು ತಮ್ಮ ಬಳಿ ಸಂಪನ್ಮೂಲ ಇಲ್ಲ ಎಂಬ ಕಾರಣಕ್ಕಾಗಿ ಬರಲಾಗಲಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

“ಎಷ್ಟು ಹಿರಿಯರು ತಮ್ಮ ಕಿರಿಯರಿಗೆ ಯೋಗ್ಯ ಸಂಬಳ ಕೊಡುತ್ತಿದ್ದಾರೆ? ದೆಹಲಿ, ಮುಂಬೈ, ಬೆಂಗಳೂರು ಅಥವಾ ಕೋಲ್ಕತ್ತಾದಲ್ಲಿ ಉಳಿದುಕೊಂಡ ಕಿರಿಯ ವಕೀಲರು ಬದುಕಲು ಎಷ್ಟು ವೆಚ್ಚವಾಗುತ್ತದೆ. ಅಲಾಹಾಬಾದ್ನಂತಹ ಸ್ಥಳದಲ್ಲಿಯೂ ಸಹ, ಬೇರೆ ಜಿಲ್ಲೆಯಿಂದ ಬರುವ ಕಿರಿಯ ವಕೀಲರು ಉಳಿದುಕೊಳ್ಳಲು ಸ್ಥಳ, ಬಾಡಿಗೆ, ಸಾರಿಗೆ, ಆಹಾರಕ್ಕೆ ವೆಚ್ಚ ಮಾಡಬೇಕು. ಕಿರಿಯ ವಕೀಲರಿಗೆ ಹಣವನ್ನೇ ನೀಡದ ವಕೀಲರ ಕಚೇರಿಗಳೂ ಇವೆ. ಇದು ಬದಲಾಗಬೇಕು ಮತ್ತು ವೃತ್ತಿಯ ಹಿರಿಯ ಸದಸ್ಯರಾದ ನಮ್ಮ ಮೇಲೆ ಹಾಗೆ ಆಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇದೆ” ಎಂದರು.

“ನಮ್ಮ ವೃತ್ತಿಯಲ್ಲಿ ಕಿರಿಯರು ಅನೌಪಚಾರಿಕ ಜಾಲದ ಮೂಲಕ ಹಿರಿಯ ನ್ಯಾಯವಾದಿಗಳನ್ನು ಹುಡುಕುವುದು ಅಸಾಮಾನ್ಯ ಸಂಗತಿಯೇ ಸರಿ. ಇದನ್ನು ಕೆಲವರು ಓಲ್ಡ್ ಬಾಯ್ಸ್ ಕ್ಲಬ್ ಎಂತಲೂ ಕರೆಯುತ್ತಾರೆ. ಅರ್ಹತೆ ಆಧಾರದಲ್ಲಿ ಕಿರಿಯ ವಕೀಲರನ್ನು ಆಯ್ಕೆ ಮಾಡುವ ವಿಧಾನ ನಮ್ಮಲ್ಲಿ ಇಲ್ಲ” ಎಂದು ಅವರು ಹೇಳಿದರು.