ಬೆಂಗಳೂರು(Bengaluru): ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸುಗಮ ಸಂಗೀತದ ಪ್ರಸಿದ್ದ ಗಾಯಕರಾಗಿದ್ದ, ತಮ್ಮ ಮೋಹಕ ಕಂಠದಿಂದ ನಾಡಿನ ಜನರ ಮನಸೂರೆಗೊಂಡಿದ್ದ ಶಿವಮೊಗ್ಗ ಸುಬ್ಬಣ್ಣ (83) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ ಅವರನ್ನು ಅಗಲಿದ್ದಾರೆ.
ಶಿವಮೊಗ್ಗ ಜಿಲ್ಲೆಯವರಾದ ಶಿವಮೊಗ್ಗ ಸುಬ್ಬಣ್ಣ, ಕರ್ನಾಟಕದ ಸಾಂಸ್ಕೃತಿಕ ಲೋಕದ ರಾಯಬಾರಿ ಗಳಲ್ಲಿ ಒಬ್ಬರಾಗಿದ್ದರು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ತಮ್ಮ ಅಧ್ಬುತ ಕಂಠಸಿರಿ ಗೆ ಹೆಸರಾಗಿದ್ದ ಸುಬ್ಬಣ್ಣ ನವರು, ಕನ್ನಡ ಚಿತ್ರರಂಗಕ್ಕೆ ಪ್ರಪ್ರಥಮ ರಾಷ್ಟ್ರಮಟ್ಟದ ರಜತಕಮಲ ಪ್ರಶಸ್ತಿ ದೊರಕಿಸಿ ಕೊಟ್ಟವರು. ಸುಗಮ ಸಂಗೀತ ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದ ಸುಬ್ಬಣ್ಣನವರ ನಿಧನದಿಂದ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆದ ದೊಡ್ಡ ನಷ್ಟವಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ, ಎಂದು ಪ್ರಾರ್ಥಿಸುವುದಾಗಿ ಗೃಹ ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹೆಸರಾಂತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ವಾರ್ತೆ ಅತೀವವಾದ ದುಃಖದ ಸಂಗತಿಯಾಗಿದೆ ಎಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.
ವಕೀಲ ವೃತ್ತಿಯಲ್ಲಿ ಹೆಸರು ಗಳಿಸಿದ್ದ ಇವರು ಸುಗಮ ಸಂಗೀತವನ್ನು ತಮ್ಮ ಪ್ರವೃತ್ತಿಯಾಗಿಟ್ಟುಕೊಂಡಿದ್ದರು. ಜನ-ಮನ ಗೆದ್ದಿದ್ದ ಅವರು ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾಗಿದ್ದರು. ಅವರ ನಿಧನದಿಂದ ರಾಜ್ಯವು ಹಿರಿಯ ಚೇತನವನ್ನು ಕಳೆದುಕೊಂಡಂತಾಗಿದೆ.
ಶ್ರೀಯುತರ ಅಗಲಿಕೆಯಿಂದ ಅವರ ಕುಟುಂಬವರ್ಗದವರಿಗೆ ಹಾಗೂ ಅವರ ಅಭಿಮಾನಿ ಗಳಿಗೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕನ್ನಡದ ಶ್ರೇಷ್ಠ ಸುಗಮ ಸಂಗೀತ ಲೋಕದ ದಿಗ್ಗಜ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಸುಗಮ ಸಂಗೀತವನ್ನು ಜನಮನ ಮುಟ್ಟಿಸುವಲ್ಲಿ ಅಪಾರ ಶ್ರಮಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರು ನಿಧನದ ಸುದ್ದಿ ತಿಳಿದು ದುಃಖವಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.














