ಮನೆ ಅಪರಾಧ ಪ್ರತ್ಯೇಕ ಪ್ರಕರಣ: 17 ಲಕ್ಷ ಮೌಲ್ಯದ ಡ್ರಗ್ಸ್ ವಶ

ಪ್ರತ್ಯೇಕ ಪ್ರಕರಣ: 17 ಲಕ್ಷ ಮೌಲ್ಯದ ಡ್ರಗ್ಸ್ ವಶ

0
ಸಾಂದರ್ಭಿಕ ಚಿತ್ರ

ಬೆಂಗಳೂರು(Bengaluru): ಜೀವನ್‌ಭಿಮಾನಗರ ಹಾಗೂ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿರುವ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 17 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಡ್ರಗ್ಸ್ ಮಾರಾಟದ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ಪೊಲೀಸರ ತಂಡಗಳು ದಾಳಿ ಮಾಡಿದ್ದವು. ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಜೀವನ್‌ಭಿಮಾನಗರ ಬಳಿಯ ಮೈದಾನವೊಂದರಲ್ಲಿ ನಿಂತಿದ್ದ ಪೆಡ್ಲರ್, ಗಾಂಜಾ ಮಾರುತ್ತಿದ್ದ. ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಕಾರ್ಮಿಕರು ಆರೋಪಿ ಬಳಿ ಗಾಂಜಾ ಖರೀದಿಸುತ್ತಿದ್ದರು ಎಂದು ಜೀವನ್‌ಭಿಮಾನಗರ ಠಾಣೆ ಪೊಲೀಸರು ತಿಳಿಸಿದರು.

ಹೊರ ರಾಜ್ಯದಿಂದ ಗಾಂಜಾ ತರಿಸುತ್ತಿದ್ದ ಆರೋಪಿ, 10 ಗ್ರಾಂ ಗಾಂಜಾವನ್ನು ₹1,500ರಿಂದ ₹2,000ಕ್ಕೆ ಮಾರುತ್ತಿದ್ದ. ಈತನಿಂದ ₹ 2 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದಿದ್ದ ತಾಂಜೇನಿಯಾ ಪ್ರಜೆ ಬರಾಕಾ ಸಾಲೇಮಾನಿ ಚಾವು (28), ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ. ಈತನನ್ನು ಬಂಧಿಸಿ, ₹ 15 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ನಗರದ ಕಾಲೇಜೊಂದರಲ್ಲಿ ಆರೋಪಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ. ಐಷಾರಾಮಿ ಜೀವನ ನಡೆಸುವುದಕ್ಕಾಗಿ ಡ್ರಗ್ಸ್ ಮಾರುತ್ತಿದ್ದ. ಕೆಲ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಡ್ರಗ್ಸ್ ಖರೀದಿಸುತ್ತಿದ್ದರು ಎಂದೂ ಮಾಹಿತಿ ನೀಡಿದರು.