ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀವ್ರ ಹಿಂದುಳಿದಿದ್ದು, ಈ ಭಾಗದ ಯುವಕರಿಗೆ ಉದ್ಯೋಗ ದೊರಕಿಸಲು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಂದು ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕ.ಕ. ಭಾಗದ ಯುವಜನರು ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಅರ್ಹರಾಗುವಂತೆ ಮಾಡುವ ಅಗತ್ಯವಿದ್ದು, ಈ ಭಾಗದ ಯಾವುದಾದರೂ ಒಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದರು.
ಕಕ ನೇಮಕಾತಿಗೆ ಹಣಕಾಸು ಇಲಾಖೆ ಪೂರ್ವಾನುಮತಿ ಅಗತ್ಯವಿಲ್ಲ:
ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಸಾಂವಿಧಾನಿಕ ತಿದ್ದುಪಡಿ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಅಗತ್ಯವಿಲ್ಲ ಎಂದು ಸರ್ಕಾರಿ ಆದೇಶವೇ ಇದೆ. ಆದಾಗ್ಯೂ ನೇಮಕಾತಿ ವೇಳೆ ಹಣಕಾಸು ಇಲಾಖೆ ಅನುಮೋದನೆಗೆ ಕಡತ ಕಳಿಸುತ್ತಿದ್ದು, ಇದರಿಂದ ನೇಮಕಾತಿ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಅರಣ್ಯ ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಮನವಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯ ಶಿಕ್ಷಣಕ್ಕೆ ಆದ್ಯತೆ ನೀಡುವ ಅಗತ್ಯವಿದ್ದು, ಎಲ್ಲ 7 ಜಿಲ್ಲಾ ಕೇಂದ್ರದಲ್ಲೂ ಒಂದೊಂದು ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪಿಸಬೇಕು ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಮನವಿ ಮಾಡಿದರು.
ಅದೇ ರೀತಿ ಕಲ್ಯಾಣ ಕರ್ನಾಟಕದಾದ್ಯಂತ ಖಾಲಿ ಇರುವ ಸುಮಾರು 6639 ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡಬೇಕು, ಇದಕ್ಕೆ ಅನುಮೋದನೆ ನೀಡಿ ಎಂದು ಕೋರಿದರು.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ: ಈಶ್ವರ ಖಂಡ್ರೆ ಮನವಿ:
ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯವಿದ್ದು, ಕೈಗಾರಿಕೆಗಳಿಲ್ಲದೆ ಈ ಪ್ರದೇಶ ಹಿಂದುಳಿದಿದೆ. ಜೊತೆಗೆ ಇಲ್ಲಿ ಕಚ್ಚಾ ಸಾಮಗ್ರಿ, ನೈಸರ್ಗಿಕ ಸಂಪನ್ಮೂಲದ ಕೊರತೆಯೂ ಇದೆ ಹೀಗಾಗಿ, ಕ.ಕ. ಭಾಗಕ್ಕೆ ಪ್ರತ್ಯೇಕವಾದ ಕೈಗಾರಿಕಾ ನೀತಿ ರೂಪಿಸಬೇಕು ಎಂದು ಸಭೆಗೆ ಈಶ್ವರ ಖಂಡ್ರೆ ಮನವಿ ಮಾಡಿದರು.
ವೈದ್ಯಕೀಯ ಸೌಲಭ್ಯ ವರ್ಧನೆಗೂ ಮನವಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳ ಹೆಚ್ಚಳ ಮಾಡುವ ಅಗತ್ಯವಿದೆ. ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ನೆಫ್ರಾಲಜಿ (ಮೂತ್ರಪಿಂಡ, ಮೂತ್ರಕೋಶ ಚಿಕಿತ್ಸಾ ವಿಭಾಗ) ಘಟಕ ಮತ್ತು ಕ್ಯಾಥ್ ಲ್ಯಾಬ್ ಆರಂಭವಾಗಿಲ್ಲ. ಇದನ್ನು ಆದ್ಯತೆಯ ಮೇಲೆ ಆರಂಭಿಸಬೇಕು ಎಂದು ಮನವಿ ಮಾಡಿದರು.
ಬೀದರ್ ವಿಮಾನಯಾನ ಪುನಾರಂಭಕ್ಕೆ ಮನವಿ:
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ಬೀದರ್ ನಗರಕ್ಕೆ ನಾಗರಿಕ ವಿಮಾನಯಾನ ಆರಂಭವಾಗಿತ್ತು. ಆದರೆ ಈಗ ಕಳೆದ 6 ತಿಂಗಳಿಂದ ವಿಮಾನ ಯಾನ ರದ್ದುಪಡಿಸಲಾಗಿದೆ. ಉಡಾನ್ ಅಡಿಯಲ್ಲಿ ಸಬ್ಸಿಡಿ ನೀಡದಿರುವುದೇ ಇದಕ್ಕೆ ಕಾರಣವಾಗಿದೆ. ಕೂಡಲೇ ಬೀದರ್ ಗೆ ನಾಗರಿಕ ವಿಮಾನಯಾನ ಸೇವೆ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದರು.