ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಸುಂಕಸಾಳ ಬಳಿ ಎರಡು ಖಾಸಗಿ ಬಸ್ ಹಾಗೂ ಲಾರಿ ನಡುವೆ ಸರಣಿ ಅಪಘಾತವಾಗಿದ್ದು, ವಿದೇಶಿ ಪ್ರಜೆಗಳು ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಲಾರಿ, ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಎರಡು ಬಸ್ಸುಗಳಿಗೆ ಸರಣಿ ಅಪಘಾತವಾಗಿದೆ. ಲಾರಿ ಮತ್ತು ಸಿಬರ್ಡ್ ಬಸ್ ಮುಖಾಮುಖಿ ಡಿಕ್ಕಿಯಾದವು. ನಂತರ ಹಿಂಬದಿಯಿಂದ ಸಿಬರ್ಡ್ ಬಸ್ಗೆ ಗಣೇಶ್ ಟ್ರಾವೆಲ್ಸ್ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಪಲ್ಟಿಯಾಗಿ, ಲಾರಿ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ.
ಹಂಪಿಯಿಂದ ಗೋವಾಕ್ಕೆ ತೆರಳುತ್ತಿದ್ದ 12 ವಿದೇಶಿ ಪ್ರಯಾಣಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಅಂಕೋಲ ಹಾಗೂ ಕಾರವಾರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಿಂದ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಇದೀಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















