ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಸರಣಿ ಭೂಕಂಪ ಗಳಿಂದ ಸಾವನ್ನಪ್ಪಿದ್ದವರ ಸಂಖ್ಯೆ ಸೋಮವಾರ 2,400ಕ್ಕೆ ಏರಿಕೆಯಾಗಿದೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ವಕ್ತಾರ ಜನನ್ ಸೈಕ್ ತಿಳಿಸಿದ್ದಾರೆ.
ಹೆರಾತ್ ನ ಜಿಂದಾ ಜನ್ ಜಿಲ್ಲೆಯ 13 ಹಳ್ಳಿಗಳಲ್ಲಿ ವಾಸಿಸುತ್ತಿದ್ದವರು ಹೆಚ್ಚಿನ ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ. 1,320 ಮನೆಗಳು ನಾಶವಾಗಿವೆ ಎಂದು ಹೇಳಿದರು.
900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಶನಿವಾರದಂದು ಪಶ್ಚಿಮ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದರ ನಂತರ, 6.3, 5.9 ಮತ್ತು 5.5 ರ ತೀವ್ರತೆಯ ಮೂರು ಭೂಕಂಪಗಳು ಸಹ ಸಂಭವಿಸಿತ್ತು.
ಹೆರಾತ್ ನಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸುಮಾರು 6 ಗ್ರಾಮಗಳು ನಾಶವಾಗಿವೆ, ನೂರಾರು ನಾಗರಿಕರು ಅವಶೇಷಗಳಡಿ ಸಮಾಧಿಯಾಗಿದ್ದಾರೆ. ಹೆರಾತ್ ನ ಭೂಕಂಪ ಪೀಡಿತ ಪ್ರದೇಶಗಳಿಗೆ ಆದಷ್ಟು ಬೇಗ ತಲುಪುವಂತೆ ಸ್ಥಳೀಯ ಸಂಸ್ಥೆಗಳಿಗೆ ತಾಲಿಬಾನ್ ಮನವಿ ಮಾಡಿದೆ.
ಸಹಾಯ ಸಂಸ್ಥೆಗಳು ಗಾಯಾಳುಗಳನ್ನು ಆದಷ್ಟು ಬೇಗ ಆಸ್ಪತ್ರೆಗಳಿಗೆ ಕರೆದೊಯ್ಯಬೇಕು ಮತ್ತು ಭೂಕಂಪದಿಂದಾಗಿ ನಿರಾಶ್ರಿತರಾದವರಿಗೆ ತಂಗಲು ಸ್ಥಳಗಳನ್ನು ಒದಗಿಸಬೇಕು ಎಂದು ತಾಲಿಬಾನ್ ಹೇಳಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 12 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಭೂಕಂಪದಲ್ಲಿ ಮೃತಪಟ್ಟವರಿಗೆ ತಾಲಿಬಾನ್ ಸಂತಾಪ ವ್ಯಕ್ತಪಡಿಸಿದೆ. ಕಳೆದ ಎರಡು ದಶಕಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ.