ಮನೆ ಮನರಂಜನೆ ತಂದೆಯಿಂದಲೇ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ವಿರುದ್ಧ ಗಂಭೀರ ಆರೋಪ.!

ತಂದೆಯಿಂದಲೇ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ವಿರುದ್ಧ ಗಂಭೀರ ಆರೋಪ.!

0

ಕುಂದಾಪುರ: ಟಿವಿ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಪ್ರಸಿದ್ಧರಾದ ಚೈತ್ರಾ ಕುಂದಾಪುರ ಇದೀಗ ಗಂಭೀರ ವಿವಾದದಲ್ಲಿ ಸಿಲುಕಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅವರ ತಂದೆ ಬಾಲಕೃಷ್ಣ ಅವರು ಚ್ರೈತ್ರಾ ವಿರುದ್ಧ ನೇರವಾಗಿ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ.

‘ಚೈತ್ರಾ ಅವರು ಗೆಳೆಯರ ಜೊತೆ ಮನೆಗೆ ಬಂದು ದೊಡ್ಡ ಮಟ್ಟದ ದುಡ್ಡಿನ ವ್ಯವಹಾರ ಮಾಡುತ್ತಿದ್ದರು. ಒಂದು ದಿನ ರಾತ್ರಿ ಕೋಟ್ಯಂತರ ರೂಪಾಯಿ ತಂದು ಎಣಿಸಿದ್ದನ್ನು ಕಂಡು ನಾನು ಭಯಗೊಡೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಅವರು ದಬಾಯಿಸಿದರು. ಹೀಗಾಗಿ, ನಾನು ಮಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕೆಲಸಕ್ಕೆ ಸೇರಿದೆ. ಈ ವಿಚಾರವನ್ನು ನಾನು ಎಲ್ಲಾದರೂ ಹೇಳಬಹುದು ಎಂಬ ಕಾರಣಕ್ಕೆ ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಅವರನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ, ಆತ ಸರಿಯಿಲ್ಲ ಎಂದು ಹೇಳಿದೆ. ನನ್ನ ಮಗಳು ಚೈತ್ರಾ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದಳು. ಇದರಲ್ಲಿ ನನ್ನ ಪತ್ನಿ ರೋಹಿಣಿ ಕೂಡ ಶಾಮೀಲಾಗಿದ್ದಾಳೆ’ ಎಂದು ದೂರಿದ್ದಾರೆ.

‘ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲೆಗೈಯ್ಯುವ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಯಾವ ಹೇಯ ಕೃತ್ಯವನ್ನು ಎಸಗಲು ಅವಳು ಸಿದ್ಧಳಿದ್ದಾಳೆ. ನನಗೆ ರಕ್ಷಣೆ ನೀಡಿ’ ಎಂದು ಬಾಲಕೃಷ್ಣ ಕೋರಿದ್ದಾರೆ.