ಬೆಂಗಳೂರು: ನಂಜುಂಡೇಶ್ವರ ನಗರದ ಮಾರಪ್ವನಪಾಳ್ಯ ವಾರ್ಡ್ ನಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾದ ತೂಕ ವಿಲ್ಲದೆ ಪಡಿತರ ನೀಡಲಾಗುತ್ತಿತ್ತು ಹಾಗೂ ಸಾರ್ವಜನಿಕರು ಪಡಿತರ ಪಡೆಯಲು ಹೋದಾಗ ಸರ್ವರ್ ಸಮಸ್ಯೆ ಇದೆ ಎಂದು ಹೇಳುತ್ತಿದ್ದರು.
ವಿಷಯ ತಿಳಿದ ಶಾಸಕ ಕೆ. ಗೋಪಾಲಯ್ಯ ಅವರು ಸ್ಥಳಕ್ಕೆ ಆಗಮಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊಬೈಲ್ ಒ.ಟಿ.ಪಿ. ಮೂಲಕ ಪಡಿತರ ವಿತರಿಸುವಂತೆ ಹಾಗೂ ನಿಖರವಾದ ತೂಕದ ಪಡಿತರ ವಿತರಿಸಲು ಕೂಡಲೆ ಕಟ್ಟುನಿಟ್ಟಿನ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಇಡೀ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿದ್ದು, ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರುಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಆದುದರಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಒ.ಟಿ.ಪಿ. ಮೂಲಕ ಪಡಿತರ ವಿತರಣೆ ಮಾಡುವಂತೆ ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಅಲ್ಲದೆ ನಿಗದಿತ ಸಮಯದಲ್ಲಿ ಅಂಗಡಿ ತೆರೆಯಬೇಕು ಹಾಗೂ ಸರ್ವರ್ ಸಮಸ್ಯೆಯನ್ನು 2 ದಿನದ ಒಳಗಾಗಿ ಸರಿಪಡಿಸಬೇಕು ಎಂದು ಇಲಾಖೆಯ ಸಚಿವರಾದ ಕೆ.ಹೆಚ್.ಮುನಿಯಪ್ಪರವರಿಗೆ ಮನವಿ ಮಾಡಿದರು.
ಇದೆ ವೇಳೆ ಆಹಾರ ಇಲಾಖೆಯ ಆಯುಕ್ತರು ಹಾಗೂ ಜಂಟಿ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಒ.ಟಿ.ಪಿ. ಮೂಲಕ ಪಡಿತರ ವಿತರಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.