ಮನೆ ರಾಜ್ಯ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು: ಮಹೇಶ್ ಶೆಣೈ 

ಆಟೋ ಚಾಲಕರ ಸೇವೆ ಮೌಲ್ಯಯುತವಾದುದು: ಮಹೇಶ್ ಶೆಣೈ 

0

ಮೈಸೂರು(Mysuru): ಬಡವರ ರಥ ಎಂದೇ ಕರೆಯಲ್ಪಡುವ ಆಟೋವನ್ನು ಚಾಲನೆ ಮಾಡುವ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ  ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶೆಣೈ  ಹೇಳಿದರು.

75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ ಗಣೇಶ ಹಬ್ಬದ ಅಂಗವಾಗಿ 250ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ನೀಡಿ  ಮಾತನಾಡಿದ ಅವರು  ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿ ಶ್ರಮಿಸುತ್ತಿರುವ ಚಾಲಕರು ಬಡವರ ಬಂಧುಗಳಾಗಿದ್ದಾರೆ. ಅಂತಹ ಸೇವೆಗೆ ಬೆಲೆಕಟ್ಟಲಾಗದು ಎಂದರು.

ಮಧ್ಯರಾತ್ರಿಯಲ್ಲಿ ದೂರದ ಊರುಗಳಿಂದ ಬರುವ ಗ್ರಾಮೀಣಭಾಗದ ಜನರನ್ನು ಸುರಕ್ಷಿತವಾಗಿ ಅವರ ಮನೆಯ ಬಾಗಿಲಿಗೆ ತಲುಪಿಸುವ ಕಾಯಕ ಮಾಡುತ್ತಿದ್ದಾರೆ. ಅಂತಹ ಚಾಲಕರಿಗೆ ನಾನು ಕೈ ಮುಗಿದು ಧನ್ಯವಾದ ಹೇಳುತ್ತೇನೆ ಎಂದರು.

ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ವಜನಿಕ ಗಣೇಶೋತ್ಸವ ನೀಡಿದ ಕೊಡುಗೆ ಅಪಾರ. ಬ್ರಿಟಿಷರ ವಿರುದ್ಧ ಇಡೀ ಸಮಾಜವನ್ನು ಜಾಗೃತಗೊಳಿಸಲು ಲೋಕಮಾನ್ಯ ಬಾಲಗಂಗಾಧರ  ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಚದುರಿ ಹೋದ ಸಮಾಜವನ್ನು ಧಾರ್ಮಿಕವಾಗಿಯೂ ಸಂಘಟಿಸಬಹುದು ಎಂದು ತೋರಿಸಿಕೊಟ್ಟರು, ಏಕತೆಯನ್ನು ಸಾಧಿಸುವುದಕ್ಕೆ ಜನರನ್ನು ಸಮಾಜಮುಖಿಯನ್ನಾಗಿಸುವುದಕ್ಕೆ ಸಾರ್ವಜನಿಕ ಗಣೇಶೋತ್ಸವ ಅತ್ಯುತ್ತಮ ಸಾಧನ ಎಂಬುದನ್ನು ತೋರಿಸಿಕೊಟ್ಟರು. ಬಹುತೇಕ ಹಬ್ಬಹರಿದಿನಗಳು ವ್ಯಕ್ತಿಗತವಾಗಿ ಕುಟುಂಬಕ್ಕೆ ಸೀಮಿತವಾಗಿ ಆಚರಿಸುತ್ತೇವೆ. ಆದರೆ ಕೆಲವೊಂದು ಧಾರ್ಮಿಕ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸಿದರೆ ಅದರಿಂದ ಸಮಾಜಕ್ಕೊಂದು ಅದ್ಭುತ ಶಕ್ತಿ ಲಭಿಸುತ್ತದೆ. ಅದು ರಾಷ್ಟ್ರದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಆ ಮೂಲಕ ಭಾರತ ಜಗತ್ತಿನ ಬಲಿಷ್ಟ ರಾಷ್ಟ್ರವಾಗಿ ಮೇಲೆದ್ದು ನಿಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಖಿಲೇಶ್ ,ಬಿಜೆಪಿ ಮುಖಂಡರಾದ ಪರಮೇಶ್ ಗೌಡ,ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹರೀಶ್ ನಾಯ್ಡು,ಗಣೇಶ್,ಶ್ಯಾಮ್, ಸುಚೀಂದ್ರ, ಆಟೋ ಚಾಲಕರಾದ ಅಶ್ವಥ್, ಮನು, ಪ್ರದೀಪ್, ನವೀನ, ಮಹದೇಶ ಹಾಜರಿದ್ದರು.