ಬದುಕನ್ನು ಬಂದಹಾಗೆ ಸ್ವೀಕರಿಸಿ. ಹೊಂದಾಣಿಕೆಯಿಂದ ಬಾಳಿ. ಬದುಕು, ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’.
ಕಾಲೇಜು ಹುಡುಗರ ತುಂಟತನ, ಹೀರೊ ಬಿಲ್ಡಪ್’ಗೆ ಹೊಡೆದಾಟ, ಸೀನಿಯರ್– ಜ್ಯೂನಿಯರ್ ತರಲೆ, ಒಂದೆರಡು ಕ್ಷಣ ನಗು ಮೂಡಿಸಿ ಮಾಯವಾಗುವ ಸನ್ನಿವೇಶ, ಎಂಜಿನಿಯರಿಂಗ್ ಕಾಲೇಜು ಹುಡುಗ–ಹುಡುಗಿಯರ ಎಂಟನೇ ತರಗತಿ ಮಟ್ಟದ ಪ್ರೇಮಕಥೆ, ಪ್ರೇಯಸಿಗೆ ಮುತ್ತಿಟ್ಟವನನ್ನು ಎಳೆದೊಯ್ಯುವ ಪೊಲೀಸ್ ಗಿರಿ..!
ಇದನ್ನೆಲ್ಲ ಹೊಂದಿಸಿ ತೆಗೆದ ಸಿನಿಮಾ ಇದು.ನಾಲ್ವರು ಗೆಳೆಯರ ಗುಂಪಿನಲ್ಲಿ ಆರಂಭವಾಗುವ ಪ್ರೇಮಕಥೆ, ಗೆಳತಿಯರ ಬಳಗದಲ್ಲೊಬ್ಬಳ ಆತ್ಮಹತ್ಯೆ ಎಂಬ ಉಪಕಥೆ.
ಅಲ್ಲೊಂದು – ಇಲ್ಲೊಂದು ಮೌನ ಬೋಧನೆ, ಯಾರು ಯಾರನ್ನು ಪ್ರೀತಿಸುತ್ತಾರೆ, ಎಲ್ಲಿ ಸೇರುತ್ತಾರೆ, ಏನಾಗುತ್ತದೆ ಎಂಬುದೊಂದೂ ಅರ್ಥವಾಗದೇ ಗೋಜಲು, ಪೇಲವತೆಗಳ ಮೊದಲಾರ್ಧವನ್ನು ಪ್ರೇಕ್ಷಕ ಸಹಿಸಿಕೊಳ್ಳಲೇಬೇಕು.
ಉತ್ತರಾರ್ಧದಲ್ಲಿ ಅಷ್ಟೋ ಇಷ್ಟೋ ಕಥೆ ಸಾಗುತ್ತದೆ. ಅದೂ ಗಂಡ ಹೆಂಡತಿಯ ಚಿಲ್ಲರೆ ಜಗಳಗಳು, ಅಪ್ಪ ಅಮ್ಮನ ಬೋಧನೆ, ಅದುವರೆಗೆ ಕಾಣೆಯಾಗಿದ್ದ ಅಂತರ್ಮುಖಿ ನಾಯಕ (ನವೀನ್ ಶಂಕರ್) ಮೇಷ್ಟ್ರಾಗಿ, ಬದುಕು ಬದಲಿಸಿಕೊಂಡು ಗರ್ಭಿಣಿ ವಿಧವೆಯೊಬ್ಬಳನ್ನು (ಅರ್ಚನಾ ಜೋಯಿಸ್) ಮದುವೆಯಾಗುವುದು, ಅವಳೊಂದು ಹೆಣ್ಣು ಮಗು ಹೆತ್ತು ಸಾಯುವುದು, ಕೊನೆಗೆ ಚಿತ್ರದ ಶುಭಂ.
ದ್ವಿತಿಯಾರ್ಧದಲ್ಲಿ ಪ್ರೇಕ್ಷಕರು ನಿಶ್ಯಬ್ದರಾಗಿಬಿಡುವುದು ಚಿತ್ರದ ಸಾಮರ್ಥ್ಯ ಎನ್ನಬಹುದು. ಏನೇ ಆದರೂ ದ್ವಿತೀಯಾರ್ಧದ ಕಥೆಯ ಓಟ ಸಾಲದು.
ಗೆಳೆಯರ ಪೈಕಿ, ಇಬ್ಬರಿಗೆ ಸಹೋದ್ಯೋಗಿಗಳೇ ಇಷ್ಟವಾಗುವುದು, ಅವರ ಪೈಕಿ ಒಬ್ಬನ ಗೆಳತಿ ಕೈಕೊಡುವುದು… ಮತ್ತೊಂದಿಷ್ಟು ಹುಡುಕಾಟಗಳು, ಗೋಜಲುಗಳು, ಬೋಧನೆಗಳಲ್ಲಿ ಎರಡೂ ಕಾಲು ಗಂಟೆ ಕಳೆದುಹೋಗುತ್ತದೆ.
ಹಾಗಿದ್ದರೂ ನವೀನ್ ಶಂಕರ್ ನ ನಟನೆ, ಪಕ್ವತೆಗೆ ಪೂರ್ಣ ಅಂಕ ನೀಡಬಹುದು. ಅಂತರ್ಮುಖಿ ಯುವಕನ ಪಾತ್ರ. ಎಲ್ಲ ಪಾತ್ರಗಳನ್ನು ಮೀರಿಸಿದ ಅಭಿನಯವನ್ನು ಅವರು ತೋರಿದ್ದಾರೆ. ಅರ್ಚನಾ ಜೋಯಿಸ್ ಅಭಿನಯ ಗಾಂಭೀರ್ಯದಿಂದ ಮನಮುಟ್ಟುತ್ತದೆ.
ಐಶಾನಿ ಶೆಟ್ಟಿ ‘ಗೊಂಬೆ’ ಆಗಿಬಿಟ್ಟಿದ್ದಾರೆ. ಸಂಯುಕ್ತಾ ಹೊರನಾಡು ನಗು ತೋರಿಸಿ ಹೋಗಿದ್ದಾರೆ. ಪುಟ್ಟಪಾತ್ರವಾದರೂ ಕಾಣಿಸುವ ಸಿಸಿಲಿಯಾ ಡೆಬ್ಬರಮಾ ನೆನಪಿನಲ್ಲುಳಿಯುತ್ತಾರೆ.
ಬೆಳಕಲಿ ಕಾಣದ ಇರುಳಿಗೂ…, ತಲೆಹರಟೆ ಮಾಡುತ್ತಿದೆ ಈ ಹೃದಯ… ಹಾಡುಗಳು ಚೆನ್ನಾಗಿವೆ. ಹಿನ್ನೆಲೆ ಸಂಗೀತವೂ ಹಿತಮಿತವಾಗಿದೆ. ಛಾಯಾಗ್ರಹಣವೂ ಚೆನ್ನಾಗಿದೆ. ಕುಪ್ಪಳಿಯ ಕವಿಶೈಲ, ಸಮುದ್ರ ತೀರ, ಮಲೆನಾಡು ತಾಣಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ.
ಪ್ರಸ್ತುತ ಅಹಂನಿಂದ ಮನದೊಳಗೆ ಗೋಡೆ ಕಟ್ಟಿಕೊಂಡು ಬಾಳುವ ಯುವ ಜೋಡಿಗಳಿಗೆ ಈ ಚಿತ್ರ ಪ್ರಬಲವಾದ ಸಂದೇಶ ನೀಡಿದೆ.
ಒಟ್ಟಿನಲ್ಲಿ ಆರ್ಭಟಗಳಿಲ್ಲದ, ಶಾಂತ ಹರಿವಿನ ಸಿನಿಮಾ ನೋಡಬೇಕೆನ್ನುವವರಿಗೆ, ಒಂದಿಷ್ಟು ಸಂದೇಶ ಬಯಸುವವರಿಗೆ ಇಷ್ಟವಾಗಬಹುದಾದ ಚಿತ್ರ.
ಚಿತ್ರ: ಹೊಂದಿಸಿ ಬರೆಯಿರಿ
ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ
ತಾರಾಗಣ: ನವೀನ್ ಶಂಕರ್, ಶ್ರೀ ಮಹಾದೇವ್, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅರ್ಚನಾ ಕೊಟ್ಟಿಗೆ, ಸಂಯುಕ್ತಾ ಹೊರನಾಡು, ಅನಿರುದ್ಧ ಆಚಾರ್ಯ
ಸಂಗೀತ: ಜೋ ಕೋಸ್ಟಾ
ಛಾಯಾಗ್ರಹಣ: ಶಾಂತಿಸಾಗರ್ ಎಚ್.ಜಿ.
ನಿರ್ಮಾಣ: ಸಂಡೇ ಸಿನಿಮಾಸ್