ಬೆಂಗಳೂರು: ಸ್ವಚ್ಛ ಮತ್ತು ಹಸಿರು ಇಂಧನದ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಬ್ ಸ್ಟೇಷನ್‌ಗಳ ಬಳಿ ಸೋಲಾರ್ ಪಾರ್ಕ್‌ಗಳ ಸ್ಥಾಪನೆ ಹಾಗೂ ಐಪಿ ಫೀಡರ್ ಸೋಲಾರೈಸೇಶನ್ ಸಂಬಂಧ ಎಲ್ಲಾ ಆರು ಎಸ್ಕಾಂ ಅಧಿಕಾರಿಗಳೊಂದಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸಭೆ ನಡೆಸಿದರು.
ಬೆಂಗಳೂರಿನ ಬೆಳಕು ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯ ನೇತೃತ್ವವಹಿಸಿದ್ದ ಸಚಿವರು, “ಈ ಯೋಜನೆಯ ಅನುಷ್ಠಾನದಿಂದ ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಹೆಚ್ಚುತ್ತದೆ.ಇದರಿಂದಾಗಿ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ,”ಎಂದರು.
“ರಾಜ್ಯದ ಪ್ರಗತಿಯಲ್ಲಿ ಇಂಧನವು ಮಹತ್ವದ ಪಾತ್ರವನ್ನು ವಹಿಸುತ್ತದೆ, ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂರಕ್ಷಿಸಬೇಕು. ಸೌರಶಕ್ತಿಯ ಸುಲಭ ಸ್ಥಾಪನೆ ಮತ್ತು ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿವಾಗುತ್ತಿದೆ” ಎಂದರು.
ಐದು ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಬೆಸ್ಕಾಂ, ಸೆಸ್ಕಾಂ ಮತ್ತು ಹೆಸ್ಕಾಂ ಈಗಾಗಲೇ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಲು ಭೂಮಿ ಗುರುತಿಸಿವೆ. ಉಳಿದ ವಿದ್ಯುತ್ ಸರಬರಾಜು ಕಂಪನಿಗಳು ಭೂಮಿ ಗುರುತಿಸುವ ಪ್ರಕ್ರಿಯೆಯಲ್ಲಿವೆ.
ಇದೇ ವೇಳೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್ (ಐಪಿ) ತಯಾರಕರೊಂದಿಗೆ ಸಭೆ ನಡೆಸಿದ ಸಚಿವರು, ಸೋಲಾರ್ ಪಂಪ್ ಸೆಟ್ ಅಳವಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸೂಚಿಸಿದರು.
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಧನ ಸಹಾಯದೊಂದಿಗೆ ರಾಜ್ಯದಲ್ಲಿ 2014-15ರಲ್ಲಿ ಸೌರ ಚಾಲಿತ ಪಂಪ್ ಸೆಟ್ ಯೋಜನೆ ಪ್ರಾರಂಭಿಸಲಾಯಿತು.ಕರ್ನಾಟಕ ಇಂಧನ ಸಚಿವಾಲಯವು ರಾಜ್ಯದಲ್ಲಿ ಒಟ್ಟು 4369 ಸೋಲಾರ್ ಪಂಪ್ ಸೆಟ್‌ಗಳನ್ನು ಸ್ಥಾಪಿಸಿದೆ.
ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿ ಗ್ರಿಡ್ ಪೂರೈಕೆ ಲಭ್ಯವಿಲ್ಲದಿರುವಲ್ಲಿ ಡೀಸೆಲ್ ಕೃಷಿ ಪಂಪ್‌ಗಳು/ನೀರಾವರಿ ವ್ಯವಸ್ಥೆ ಬದಲಿಗೆ 7.5 ಹೆಚ್‌ಪಿ ವರೆಗಿನ ಸೌರ ಕೃಷಿ ಪಂಪ್ ಸೆಟ್‌ಗಳನ್ನು ಸ್ಥಾಪಿಸಲು ರೈತರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ಸಭೆಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Saval TV on YouTube