ಭೋಪಾಲ್ : ಚರಂಡಿ ನೀರು ಮಿಶ್ರಣಗೊಂಡಿದ್ದ, ಕುಡಿಯುವ ನೀರನ್ನು ಸೇವಿಸಿ 7 ಮಂದಿ ಸಾವನ್ನಪ್ಪಿರುವ ಘಟನೆ ಇಂದೋರ್ನ ಭಾಗೀರಥಪುರದಲ್ಲಿ ನಡೆದಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, 3 ಜನ ಸಾವನ್ನಪ್ಪಿರುವುದು ಮಾತ್ರ ದೃಢಪಟ್ಟಿದ್ದು, ಸ್ಥಳೀಯ ನಿವಾಸಿಗಳ 7 ಜನರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಡಿ.24ರಿಂದಲೇ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಈಗಾಗಲೇ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದಾರೆ.
ಮನೆಗಳ ನಲ್ಲಿಯಲ್ಲಿ ಬರುತ್ತಿದ್ದ, ನೀರಿನಿಂದ ಕೆಟ್ಟ ವಾಸನೆ ಬರುತ್ತಿತ್ತು ಮತ್ತು ಕಲುಷಿತವಾಗಿತ್ತು. ಕಳೆದ 6 ತಿಂಗಳಿನಿಂದ ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಈವರೆಗೆ ಯಾವುದೇ ಕ್ರಮಕೈಗೊಳ್ಳದೇ ಇದ್ದದ್ದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ನರ್ಮದಾ ನದಿಯಿಂದ ಬರುವ ನೀರಿನ ಮುಖ್ಯ ಪೈಪ್ಲೈನ್ ಒಂದು ಸಾರ್ವಜನಿಕ ಶೌಚಾಲಯದ ಕೆಳಗೆ ಹಾದುಹೋಗುತ್ತದೆ. ಅಲ್ಲಿ ಪೈಪ್ ಸೋರಿಕೆಯಿಂದಾಗಿ ಮಲಿನ ಜಲ ಮತ್ತು ಕುಡಿಯುವ ನೀರು ಬೆರೆತು ಹೋಗಿದೆ. ಹೊಸ ಪೈಪ್ಲೈನ್ ಹಾಕಲು ಈಗಾಗಲೇ 2.5 ಕೋಟಿ ರೂ. ಟೆಂಡರ್ ಅನುಮೋದನೆಯಾಗಿದ್ದರೂ ಕೂಡ ನಾಲ್ಕು ತಿಂಗಳುಗಳಿಂದ ಕಾರ್ಯಾರಂಭವಾಗಿಲ್ಲ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿ, ಮೂವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಒಬ್ಬ ಝೋನಲ್ ಅಧಿಕಾರಿ ಮತ್ತು ಅಸಿಸ್ಟೆಂಟ್ ಇಂಜಿನಿಯರ್ನ್ನು ಅಮಾನತು ಮಾಡಿದ್ದು, ಒಬ್ಬ ಸಬ್-ಇಂಜಿನಿಯರ್ನ್ನು ವಜಾಗೊಳಿಸಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನೂ ಈ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರನ್ನು ಮನೆ-ಮನೆ ಸಮೀಕ್ಷೆಗೆ ನಿಯೋಜಿಸಲಾಗಿದೆ.














