ಕಿಗಾಲಿ/ ರುವಾಂಡಾ: ಧಾರಾಕಾರ ಮಳೆಯ ನಂತರ ಉತ್ತರ ಮತ್ತು ಪಶ್ಚಿಮ ರುವಾಂಡಾದಲ್ಲಿ ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದಾಗಿ 100 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.
ಅಲ್ಲದೆ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಮಂಗಳವಾರ ರಾತ್ರಿಯಿಂದ ಮಳೆ ಸುರಿಯುತ್ತಿದ್ದ ಪರಿಣಾಮ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಭೂ ಕುಸಿತ ಸಂಭವಿಸಿ ಅನಾಹುತ ಉಂಟುಮಾಡಿದೆ” ಎಂದು ರುವಾಂಡಾ ಬ್ರಾಡ್ಕಾಸ್ಟಿಂಗ್ ಏಜೆನ್ಸಿ RBA ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಪ್ರವಾಹದಿಂದ ಹಲವು ಮನೆಗಳು ಕೊಚ್ಚಿಹೋಗಿದ್ದು ಸಂಚಾರ ಮಾರ್ಗಗಳು ಕಡಿತಗೊಂಡಿದೆ. ಅಲ್ಲದೆ ಭೂ ಕುಸಿತ ಸಂಭವಿಸಿ ಹಲವು ಮನೆಗಳು ನೆಲಸಮಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರವಾಹದಿಂದ ಹೆಚ್ಚಿನ ಮನೆಗಳು ಕೊಚ್ಚಿಹೋಗಿದ್ದು ಇನ್ನೂ ಪ್ರವಾಹದ ಮಟ್ಟ ತಗ್ಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದೆ.