ಭೂಪಾಲ್: ಲೈಂಗಿಕತೆಯ ಸಮ್ಮತಿ ವಯೋಮಿತಿಯನ್ನು ಈಗಿರುವ 18 ವರ್ಷದಿಂದ 16 ವರ್ಷಕ್ಕೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಸಲಹೆ ನೀಡಿದೆ.
ಕ್ರಿಮಿನಲ್ ಕಾನೂನು ಕಾಯ್ದೆ 2013 ರನ್ನು ಜಾರಿಗೊಳಿಸಿದ್ದರಿಂದಾಗಿ ಹುಡುಗಿಯರ ಲೈಂಗಿಕ ಕ್ರಿಯೆಗೆ ಸಮ್ಮತಿಸುವ ವಯಸ್ಸನ್ನು 16ರಿಂದ 18 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಸಮ್ಮತಿಯ ಲೈಂಗಿಕತೆ ವಯೋಮಿತಿಯನ್ನು 18 ವರ್ಷಕ್ಕೆ ಹೆಚ್ಚಿಸಿರುವುದು ಹದಿಹರೆಯದ ಹುಡುಗರನ್ನು ಸಮಾಜದಲ್ಲಿ ಅಪರಾಧಿಗಳೆಂದು ಪರಿಗಣಿಸುವಂತೆ ಮಾಡಿದೆ. ಇದು ಸಮ್ಮತಿಯ ಲೈಂಗಿಕ ಸಂಬಂಧ ಬೆಳೆಸುವ ಹದಿಹರೆಯದ ಹುಡುಗರಿಗೆ ಅನ್ಯಾಯ ಪರಿಣಮಿಸಿದೆ ಎಂದು ನ್ಯಾಯಮೂರ್ತಿ ದೀಪ ಕುಮಾರ್ ಅಗರ್ವಾಲ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಹದಿಹರೆಯದಲ್ಲಿ ಹುಡುಗ ಹುಡುಗಿಯರು ಸ್ನೇಹ ಬೆಳೆಸುತ್ತಾರೆ. ಬಳಿಕ ಆಕರ್ಷಣೆಯಿಂದಾಗಿ ದೈಹಿಕ ಸಂಬಂಧ ಬೆಳೆಸುತ್ತಾರೆ. ಆದರೆ ಇದರಿಂದಾಗಿ ಸಮಾಜದಲ್ಲಿ ಅವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುತ್ತಿದೆ.
ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. ಇದರಿಂದ ಹದಿಹರೆಯದ ಹುಡುಗರಿಗೆ ಅನ್ಯಾಯವಾಗುತ್ತಿದೆ ಹೀಗಾಗಿ ಅನ್ಯಾಯ ಸರಿಪಡಿಸಲು ಹುಡುಗಿಯರ ವಯೋಮಿತಿಯನ್ನು 18 ರಿಂದ 16 ವರ್ಷಕ್ಕೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದು ಕೋರ್ಟ್ ಸಲಹೆ ನೀಡಿದೆ.














