ಮನೆ ಕಾನೂನು ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು

0

ಬೆಂಗಳೂರು: ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಕೀಲ ದೇವರಾಜೇಗೌಡಗೆ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Join Our Whatsapp Group

ಜಾಮೀನು ಕೋರಿ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಇದೇ ವೇಳೆ, ಸಾಕ್ಷ್ಯಗಳ ನಾಶ ಮಾಡಬಾರದು, ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬಾರದು ಮತ್ತು ಇಬ್ಬರು ಶ್ಯೂರಿಟಿ ನೀಡಬೇಕು ಎಂಬುದಾಗಿ ನ್ಯಾಯಪೀಠ ಷರತ್ತು ವಿಧಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ಪ್ರಕರಣದ ಸಂಬಂಧ ದೂರು ದಾಖಲಿಸಿರುವ ಮಹಿಳೆಯ ವಿರುದ್ಧ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿಗೆ ಪ್ರತಿಯಾಗಿ ಅರ್ಜಿದಾರರ ವಿರುದ್ಧ ದೂರು ದಾಖಲಿಸಲಾಗಿದೆ. ಇದೊಂದು ರಾಜಕೀಯ ದುರುದ್ದೇಶದ ದೂರು. ಘಟನೆ ನಡೆದು 2023ರ ಡಿಸೆಂಬರ್ 29ರಂದು ಅತ್ಯಾಚಾರವಾಗಿದೆ ಎಂದು ಆರೂಪಿಸಿ 2024ರ ಏಪ್ರಿಲ್ 1 ಎಂದು ದೂರು ದಾಖಲಿಸಿದ್ದು, ದೂರು ದಾಖಲಿಸುವಲ್ಲಿ ವಿಳಂಬವಾಗಿದೆ. ಅಲ್ಲದೇ, ಬೆದರಿಸುವುದು ಮತ್ತು ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ದೂರು ದಾಖಲಿಸಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅತ್ಯಾಚಾರ ಆರೋಪದಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಅರ್ಜಿದಾರ ದೇವರಾಜೇಗೌಡರನ್ನು ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯಲ್ಲಿರುವ ಅಂಶಗಳು: ನಾನು ಅಮಾಯಕ. ನನ್ನ ವಿರುದ್ಧ ಮಾಟ ಮಂತ್ರದಿಂದ ವಶೀಕರಣ ಮಾಡಿದ್ದ ದೂರುದಾರೆ, ಸುಳ್ಳು ಆರೋಪ ಮಾಡಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಪೊಲೀಸರು ಹಾಗೂ ದೂರುದಾರೆ ಮಹಿಳೆ ದುರದ್ದೇಶ ಹೊಂದಿದ್ದಾರೆ. ದೂರುದಾರೆ ಮಹಿಳೆಯೇ ನನ್ನ ನಿವೇಶನದ ವ್ಯಾಜ್ಯದ ವಿಚಾರವಾಗಿ ನನ್ನನ್ನು ಸಂಪರ್ಕಿಸಿದ್ದರು. ನಂತರ ಫೋನ್ ನಂಬರ್ ಪಡೆದು ಸಂದೇಶ ಕಳುಹಿಸಿದ್ದರು. ಕೆಲ ಕಾಲದ ನಂತರ ನನ್ನ ಕಚೇರಿಗೆ ದೂರುದಾರೆಯ ಪತಿ ಭೇಟಿ ನೀಡಿ ನನ್ನ ಮೇಲೆ ಮಾಟ ಮಂತ್ರ ಮಾಡಿಸಿದ್ದರು. ನನ್ನ ಹಣೆಗೆ ಕುಂಕುಮ ಹಚ್ಚಿದರು. ಆಗ ನನಗೆ ತಲೆ ತಿರುಗಿತು. ನಂತರ ವಿಡಿಯೋ ಕಾಲ್ ಮಾಡಿ ಲೈಂಗಿಕ ಪ್ರಚೋದನೆ ನೀಡುತ್ತಿದ್ದರು. ಮಾಟ ಮಂತ್ರದಿಂದ ನಾನು ಬಲಿಪಶುವಾದೆ. ಆಕೆಯೇ ಕರೆ ಮಾಡಿ ಖಾಸಗಿ ಅಂಗ ತೋರಿಸುತ್ತಿದ್ದರು. ಮಹಿಳೆಯರನ್ನು ತೋರಿಸಿ ಕಾಮ ಪ್ರಚೋದನೆ ನೀಡುತ್ತಿದ್ದರು” ಎಂದು ಆರೋಪಿಸಿದ್ದಾರೆ.

ಇದರಿಂದಾಗಿ ದೂರುದಾರೆ ಮತ್ತವರ ಗಂಡ ನನ್ನೊಂದಿಗೆ ಕಳ್ಳಾಟವಾಡುತ್ತಿದ್ದಾರೆ ಎಂಬ ಬಗ್ಗೆ ಅನುಮಾನವಾಯಿತು. ಅದನ್ನು ನಾನು ವಿಡಿಯೋ ರೆಕಾರ್ಡ್ ಮಾಡಿಕೊಂಡೆ. ಮರುದಿನವೇ ಅನಾರೋಗ್ಯಕ್ಕೆ ಗುರಿಯಾದೆ. ಆ ಮೇಲೆ ನಾನು ಮಾಟಮಂತ್ರದಿಂದ ವಶೀಕರಣವಾಗಿದ್ದೇನೆ ಎಂಬುದು ನನಗೆ ಅರ್ಥವಾಯಿತು. ನಂತರ ಅನಾಮದೇಯ ವ್ಯಕ್ತಿ ನನಗೆ ಕರೆ ಮಾಡಿ ಎರಡು ಕೋಟಿ ಹಣ ನೀಡಬೇಕು. ಇಲ್ಲವಾದರೆ ನಿನ್ನ ಅಶ್ಲೀಲ ಪೋಟೋ-ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ತಿಳಿಸಿದರು”.

“ಈ ಬಗ್ಗೆ ನಾನು ಬೆಂಗಳೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದೆ. ವಿಚಾರಣೆಗೆ ಹಾಜರಾದ ದೂರುದಾರೆ ಆ ವೇಳೆ ನನ್ನ ಮೇಲೆ ಯಾವುದೇ ಆರೋಪ ಮಾಡಿಲ್ಲ. ಆದರೆ, ಇದೀಗ ರಾಜಕೀಯ ದುರುದ್ದೇಶದಿಂದ ದೂರು ದಾಖಲಿಸಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಹಿಂದಿನ ಲೇಖನವಾಲ್ಮೀಕಿ ಸಮುದಾಯಕ್ಕೆ ಸೇರಬೇಕಿದ್ದ ಹಣ ದಂಧಕೋರರಿಗೆ ತಲುಪಿದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ಮುಂದಿನ ಲೇಖನದಕ್ಷ ವಂಶಾಭಿವೃದ್ಧಿ:  ಭಾಗ ಎರಡು