ಬೆಂಗಳೂರು: ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ದಳ (ಎಸ್ಐಟಿ) ಬಂಧಿಸಿದೆ.
ಜರ್ಮನಿಯ ಮ್ಯೂನಿಚ್ ನಿಂದ ಗುರುವಾರ ತಡರಾತ್ರಿ 12:48ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬಂದಿಳಿದರು.
ಲುಕ್‌ಔಟ್ ನೋಟಿಸ್ ಹೊರಡಿಸಿದ್ದರಿಂದ ಇಮಿಗ್ರೇಷನ್ ಅಧಿಕಾರಿಗಳು ಮೊದಲು ಪ್ರಜ್ವಲ್‌ರನ್ನು ವಶಕ್ಕೆ ಪಡೆದುಕೊಂಡು, ಬಳಿಕ ಬಂಧನದ ವಾರಂಟ್ ಹೊಂದಿರುವ ಪೊಲೀಸರಿಗೆ ಹಸ್ತಾಂತರಿಸಿದರು. ಇಂದು ಬೆಳಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಳ್ಳಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ, ಸಿಐಡಿ ಕಚೇರಿ ಸಮೀಪ ಭದ್ರತೆ ಹೆಚ್ಚಿಸಲಾಗಿದೆ.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದರು. ಮೇ 27ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆಗೊಳಿಸಿ, “ಮೇ 31ರಂದು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಹೇಳಿದ್ದರು.