ಚಾಮರಾಜನಗರ : ಮೂರನೇ ಪತ್ನಿಯ 5 ವರ್ಷದ ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯ ಏಸಗಿದ ಅಪರಾಧಿಗೆ ನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಸಂಬಂಧ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ಮೈಸೂರಿನ ಗೌಸಿಯಾ ನಗರದ ನಿವಾಸಿಯಾಗಿದ್ದು, ಈತನ ಮೊದಲ ಹೆಂಡತಿ ದೂರವಾಗಿದ್ದಳು. ಎರಡನೇ ಪತ್ನಿ ಮೃತಪಟ್ಟಿದ್ದಳು. ಬಳಿಕ ಈತ ಮೂರನೇ ಮದುವೆಯಾಗಿದ್ದ. ಈ ಮಹಿಳೆಗೆ 5 ವರ್ಷದ ಮಗಳಿದ್ದಾಳೆ.
2022ರ ಜನವರಿ 4ರಂದು ನೊಂದ ಬಾಲಕಿಯ ತಾಯಿ ಮನೆಯಿಂದ ಹೊರ ಹೋಗಿದ್ದಾಗ, ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದನು.
ಈ ಸಂಬಂಧ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಕೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಿದ್ದಾರೆ.
ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಸಿ.ನಿಶಾರಾಣಿ ಅವರು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಸಜೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 6 ಲಕ್ಷ ರೂ. ಹಣವನ್ನು ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಕೆ. ಯೋಗೇಶ್ವರ್ ವಾದ ಮಂಡಿಸಿದ್ದಾರೆ.