ಮಂಡ್ಯ: ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹1.35 ಲಕ್ಷ ದಂಡ ವಿಧಿಸಿ ಮಂಡ್ಯ ಹೆಚ್ಚುವರಿ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ದಿಲೀಪ್ ಕುಮಾರ್ ಆದೇಶಿಸಿದ್ದಾರೆ.
ಜಿಲ್ಲೆಯ ಪಾಂಡವಪುರ ತಾಲ್ಲೂಕು, ಚಿನಕುರಳಿ ಹೋಬಳಿ, ರಾಗಿಮುದ್ದನಹಳ್ಳಿ ಬಡಾವಣೆಯ ನಿವಾಸಿ ದಿನೇಶ್ (38) ಶಿಕ್ಷೆಗೊಳಗಾದ ಆರೋಪಿ.
2021ರ ಮಾರ್ಚ್ 10ರಂದು 80 ವರ್ಷದ ವೃದ್ಧ ಮಹಿಳೆ ಮೇಲೆ ರಾಗಿಮುದ್ದನಹಳ್ಳಿ- ಬೇಬಿ ಬೆಟ್ಟದ ರಸ್ತೆಯ ಪಕ್ಕದಲ್ಲಿರುವ ಗುಮ್ಮನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆರೋಪಿ ಲೈಂಗಿಕ ದೌರ್ಜನ್ಯ ನಡೆಸಿದ್ದನು.
ಈ ಸಂಬಂಧ ಪಾಂಡವಪುರ ಪಿಎಸ್‌ಐ ಆಗಿದ್ದ ಪೂಜಾ ಕುಂತೋಜಿ ಅವರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಇನ್‌ಸ್ಪೆಕ್ಟರ್ ಕೆ.ಪ್ರಭಾಕರ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.














