ಬೆಂಗಳೂರು : ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಮಹತ್ವದ ಪುರಾವೆ ಆಗಿರುವ ಅಸಲಿ ವಿಡಿಯೊಗಳ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಆರೋಪಿಯೂ ಆಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿಡಿಯೊಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಗೊತ್ತಾಗಿದೆ.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು, ಅವರನ್ನು ಸಿಐಡಿಯ ಸೆಲ್‌ನಲ್ಲಿ ಇರಿಸಿದ್ದಾರೆ. ಸೋಮವಾರವೂ ಬೆಳಿಗ್ಗೆ ಹಾಗೂ ಸಂಜೆ ಅಧಿಕಾರಿಗಳು, ಪ್ರಜ್ವಲ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಅಸಲಿ ವಿಡಿಯೊ ಇರುವ ಮೊಬೈಲ್ ಬಗ್ಗೆಯೇ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಯಾವುದೇ ಪ್ರಶ್ನೆ ಕೇಳಿದರೂ ನನ್ನದು ಒಂದೇ ಉತ್ತರ. ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದ ಎದುರು ಇದನ್ನೇ ಹೇಳುತ್ತೇನೆ. ತನಿಖೆ ಹೆಸರಿನಲ್ಲಿ ಕಿರುಕುಳ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಪ್ರಜ್ವಲ್ ರೇವಣ್ಣ ಅಧಿಕಾರಿಗಳನ್ನು ಬೆದರಿಸಿದ್ದಾರೆ ಎಂದು ಗೊತ್ತಾಗಿದೆ.
ಎಸ್‌ಐಟಿ ತಂಡದಲ್ಲಿರುವ ಮಹಿಳಾ ಐಪಿಎಸ್ ಅಧಿಕಾರಿಗಳು ಸಹ ಪ್ರಜ್ವಲ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಕೆಲ ತಾಂತ್ರಿಕ ಪುರಾವೆಗಳನ್ನು ಮುಂದಿಟ್ಟುಕೊಂಡು ಪ್ರಶ್ನೆ ಕೇಳಿದರು. ಇವುಗಳಿಗೂ ಪ್ರಜ್ವಲ್ ಅವರು ಸಮರ್ಪಕವಾಗಿ ಉತ್ತರಿಸಿಲ್ಲವೆಂದು ಮೂಲಗಳು ಹೇಳಿವೆ.
ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿಡಿಯೊಗಳು, ಪ್ರಕರಣದ ಪ್ರಮುಖ ಪುರಾವೆಗಳು. ಆರೋಪಿ ಪ್ರಜ್ವಲ್ ರೇವಣ್ಣ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ, ವಿಡಿಯೊ ಇರುವ ಮೊಬೈಲ್ ಇದುವರೆಗೂ ಪತ್ತೆಯಾಗಿಲ್ಲ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ಲೋಕಸಭಾ ಚುನಾವಣೆ ಮತದಾನದ ಬಳಿಕ ಪ್ರಜ್ವಲ್ ದೇಶ ತೊರೆದಿದ್ದರು. ಮೇ 30ರಂದು ತಡರಾತ್ರಿ ಜರ್ಮನಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸು ಬಂದಿದ್ದಾಗ ಅವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಮೊಬೈಲ್ ಜಪ್ತಿ ಮಾಡಲಾಗಿತ್ತು. ಆದರೆ, ಆ ಮೊಬೈಲ್ ಹೊಸದಾಗಿ ಖರೀದಿಸಿದ್ದೆಂದು ಗೊತ್ತಾಗಿದೆ. ಹಳೆ ಮೊಬೈಲ್ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿವೆ.
ಮೊಬೈಲ್ ಹುಡುಕಿ ತನ್ನಿ: ನಾನು ಯಾವಾಗ, ಯಾವ ಮೊಬೈಲ್ ಬಳಸುತ್ತೇನೆ ಎಂಬುದು ನನಗೆ ಗೊತ್ತಿಲ್ಲ. ಹೆಚ್ಚಾಗಿ ನನ್ನ ಸಹಾಯಕರ ಬಳಿಯೇ ಮೊಬೈಲ್‌ಗಳು ಇರುತ್ತವೆ. ಯಾರಾದರೂ ಕರೆ ಮಾಡಿದರೆ, ಸಹಾಯಕರು ನನಗೆ ತಂದು ಕೊಡುತ್ತಾರೆ. ಮಾತನಾಡಿ ವಾಪಸು ಕೊಡುತ್ತೇನೆ. ವೈಯಕ್ತಿಕ ಮೊಬೈಲ್ ಇದ್ದರೂ ಬಳಕೆ ಮಾಡುವುದು ಕಡಿಮೆ. ಹೆಚ್ಚಿನ ಸಂದರ್ಭದಲ್ಲಿ ನನ್ನ ಬಳಿ ಮೊಬೈಲ್ ಇಟ್ಟುಕೊಳ್ಳುವುದಿಲ್ಲ. ನನ್ನ ಹಲವು ಮೊಬೈಲ್‌ಗಳು ಕಳ್ಳತನ ಸಹ ಆಗಿವೆ. ಅವುಗಳನ್ನು ನೀವೇ ಹುಡುಕಿ ತನ್ನಿ ಎಂದು ಪ್ರಜ್ವಲ್ ಹೇಳಿರುವುದಾಗಿ ಗೊತ್ತಾಗಿದೆ.
ನಾನು ಯಾವುದೇ ವಿಡಿಯೊ ಚಿತ್ರೀಕರಣ ಮಾಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳು ಎಲ್ಲವೂ ನಕಲಿ. ವಿಡಿಯೊ ಮಾರ್ಫಿಂಗ್ ಮಾಡಿ ಎಲ್ಲೆಡೆ ಹಂಚಿ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಈ ಸಂಬಂಧ ಹಾಸನ ಸೆನ್ ಠಾಣೆಯಲ್ಲೂ ಈಗಾಗಲೇ ಪ್ರಕರಣ ದಾಖಲಾಗಿದ್ದು, ಅದರ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದರೆ ನಕಲಿ ವಿಡಿಯೊಗಳು ನಿಮಗೆ ಸಿಗಬಹುದು ಎಂಬುದಾಗಿ ಪ್ರಜ್ವಲ್ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಭವಾನಿ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ ಸಾಧ್ಯತೆ
ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಭವಾನಿ ರೇವಣ್ಣ ಅವರ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಶೋಧ ಮುಂದು ವರಿಸಿದ್ದಾರೆ. ಹಾಸನ, ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನ ಹಲವು ಸ್ಥಳಗಳಿಗೆ ತೆರಳಿದ್ದ ಅಧಿಕಾರಿಗಳಿಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಬಂದಿಲ್ಲ. ಈಗ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅವರ ಸುಳಿವು ಸಿಗದಿದ್ದರೆ, ಕಾನೂನು ತಜ್ಞರ ಜೊತೆ ಚರ್ಚಿಸಿ ಲುಕ್ ಔಟ್ ನೋಟಿಸ್ ಹೊರಡಿಸುವ ಸಂಬಂಧ ಚರ್ಚಿಸ ಲಾಗುವುದು ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ಪ್ರಜ್ವಲ್ ರೇವಣ್ಣ ಅವರ ಬಳಿ ಸಿಕ್ಕಿರುವ ಮೊಬೈಲ್ ಹಾಗೂ ಇತರೆ ತಾಂತ್ರಿಕ ಪುರಾವೆಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ವಿಡಿಯೊ ಅಳಿಸಿ ಹಾಕಿರುವುದು ಕಂಡುಬಂದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿನ ಸಂತ್ರಸ್ತೆಯೊಬ್ಬರ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಜ್ವಲ್ ತಾಯಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಈ ಕುರಿತ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿರುವ ಕಾರಣ ಭವಾನಿ ಈಗ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.