ನಂಜನಗೂಡು: ಮಹಿಳಾ ನೌಕರರೊಂದಿಗೆ ಅಸಭ್ಯವಾಗಿ ಹಾಗೂ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ನಂಜನಗೂಡಿನ ಇಎಸ್ ಐ ಆಸ್ಪತ್ರೆ ಹಿರಿಯ ಫಾರ್ಮೆಸಿ ಅಧಿಕಾರಿ ಗಣೇಶ್ ರನ್ನು ವರ್ಗಾವಣೆ ಮಾಡಲಾಗಿದೆ.
ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಕೇಂದ್ರದಲ್ಲಿ OOD ಮೇಲೆ ಕರ್ತವ್ಯ ನಿರ್ವಹಿಸುವಂತೆ ವರ್ಗಾವಣೆ ಮಾಡಲಾಗಿದೆ. ಇಂದಿನಿಂದ 14 ದಿನಗಳ ಕಾಲ 22-10-2024 ರಿಂದ 4-11-2024 ರವರೆಗೆ ಕರ್ತವ್ಯ ನಿರ್ವಹಿಸುವಂತೆ ಇಎಸ್ ಐ ಆಸ್ಪತ್ರೆಯ ಅಧೀಕ್ಷಕರು ಆದೇಶಿಸಿದ್ದಾರೆ.
ಹಲವು ಮಹಿಳಾ ನೌಕರರಿಗೆ ಕರ್ತವ್ಯ ನಿರ್ವಹಿಸುವ ವೇಳೆ ಅಶ್ಲೀಲ ಪದ ಪ್ರಯೋಗ ಮಾಡುವುದು, ಅಶ್ಲೀಲ ಮೊಬೈಲ್ ಸಂದೇಶ ಕಳುಹಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ನಂಜನಗೂಡು ಕೇಂದ್ರ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.ಇದೀಗ ಗಣೇಶ್ ರನ್ನು ಮೈಸೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.