ವಕೀಲಿಕೆ ಕಲಿಯಲು ಕಚೇರಿಗೆ ಸೇರಿದ ಕಾನೂನು ವಿದ್ಯಾರ್ಥಿನಿ (ಇಂಟರ್ನ್) ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಸಂಬಂಧ ಮಂಗಳೂರಿನ ವಕೀಲ ಕೆ ಎಸ್ ಎನ್ ರಾಜೇಶ್ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು 3ನೇ ಹೆಚ್ಚವರಿ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ವಕೀಲ ಕೆ ಎಸ್ ಎನ್ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ಪ್ರಶಿಕ್ಷಣಾರ್ಥಿಯಾಗಿ ವಕೀಲರ ಕಚೇರಿಗೆ ಸೇರಿದ ನಿಷ್ಕಪಟ ಕಾನೂನು ವಿದ್ಯಾರ್ಥಿನಿ ಮೇಲೆ ಈ ರೀತಿಯ ಭಯಾನಕ ಕೃತ್ಯ ನಡೆಸಿದರೆ, ಅದು ಆಕೆಯ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಎದುರಿಸಿ, ಆರೋಪಿಯು ದೋಷಮುಕ್ತರಾಗಿ ಬರಬೇಕು” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
“ಆರೋಪಿ ಎಸಗಿರುವ ಕೃತ್ಯದ ಬಗ್ಗೆ ಸಂತ್ರಸ್ತೆಯು ಕೇವಲ ದೂರಿನಲ್ಲಿ ಮಾತ್ರವಲ್ಲದೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ದಾಖಲಿಸಿದ ಪ್ರಮಾಣೀಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಅತ್ಯಾಚಾರ, ಅತ್ಯಾಚಾರಕ್ಕೆ ಸಿದ್ಧತೆ ಮತ್ತು ಅತ್ಯಾಚಾರಕ್ಕೆ ಯತ್ನ ಕೃತ್ಯದ ನಡುವೆ ಒಂದು ತೆಳುವಾದ ವ್ಯತ್ಯಾಸವಿದೆ. ಸಿದ್ಧತೆ ಮತ್ತು ಯತ್ನದ ನಂತರದ ಕ್ರಿಯೆ ಏನಾಗಿರುತ್ತದೆ ಎನ್ನುವ ಪ್ರಶ್ನೆಗೆ ಸಾಕ್ಷ್ಯಧಾರಗಳಿಂದ ಉತ್ತರ ಸಿಗಬೇಕಿದೆ. ಸಂತ್ರಸ್ತೆ ಘನತೆಗೆ ಧಕ್ಕೆ ತಂದ ಮತ್ತು ಇನ್ಯಾವುದೇ ಅರ್ಜಿದಾರನ ಕ್ರಿಯೆಗಳ ಹಿಂದೆ, ಉದ್ದೇಶ ಹಾಗೂ ಸಿದ್ಧತೆ ನಿಸ್ಸಂದೇಹವಾಗಿತ್ತು ಎಂಬುದನ್ನು ಆರೋಪ ಪಟ್ಟಿಯ ಸಾಕ್ಷ್ಯಗಳಿಂದ ಹೈಕೋರ್ಟ್ ನಿರ್ಧರಿಸಲಾಗದು. ಅದನ್ನು ವಿಚಾರಣಾಧೀನ ನ್ಯಾಯಾಲಯವೇ ನಿರ್ಧರಿಸಬೇಕಾಗುತ್ತದೆ” ಎಂದು ಹೈಕೋರ್ಟ್ ಹೇಳಿದೆ.
“ಮಹಿಳೆ ಮೇಲೆ ಆಕ್ರಮಣ ಮಾಡಿ ಆಕೆಯ ಘನತೆ ಧಕ್ಕೆ ತಂದ ಆರೋಪದಲ್ಲಿ ಅರ್ಜಿದಾರ ತಪ್ಪಿತಸ್ಥನಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅತ್ಯಾಚಾರ ಆರೋಪವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂಬುದಾಗಿ ಅರ್ಜಿದಾರ ಪರ ವಕೀಲರು ವಾದ ಮಂಡಿಸಿದ್ದಾರೆ. ಆದರೆ, ಐಪಿಸಿ ಸೆಕ್ಷನ್ 376(2)(ಎಫ್)ಪ್ರಕಾರ ಮಹಿಳೆಯ ಸಂಬಂಧಿ, ಪೋಷಕ, ಶಿಕ್ಷಕ ಆಥವಾ ಆಕೆ ನಂಬಿದ ವ್ಯಕ್ತಿ ಅತ್ಯಾಚಾರ ಎಸಗಿದರೆ ಶಿಕ್ಷೆ ವಿಧಿಸಬಹುದಾಗಿದೆ. ಸೆಕ್ಷನ್ 376(2)(ಕೆ) ಅಡಿಯಲ್ಲಿ ಮಹಿಳೆಯ ಮೇಲೆ ನಿಯಂತ್ರಣ ಅಥವಾ ಆಕೆಯ ಮೇಲೆ ಪ್ರಭುತ್ವ ಹೊಂದಿರುವ ವ್ಯಕ್ತಿ ಅತ್ಯಾಚಾರ ಎಸಗಿದರೆ ಶಿಕ್ಷೆ ನೀಡಬಹುದಾಗಿದೆ. ಸೆಕ್ಷನ್ 376(ಸಿ)(ಎ) ಅಡಿಯಲ್ಲಿ ಅಧಿಕಾರಯುತ ಸ್ಥಾನ ಅಥವಾ ವಿಶ್ವಾಸಾರ್ಹ ಸಂಬಂಧ ಹೊಂದಿರುವ ವ್ಯಕ್ತಿ ಅತ್ಯಾಚಾರ ನಡೆಸಿದರೆ ಶಿಕ್ಷೆ ವಿಧಿಸಬಹುದು” ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, “ದೂರಿನಲ್ಲಿರುವ ಅಂಶ ಗಮನಿಸಿದರೆ, ಸಂತ್ರಸ್ತೆ ಇಂಟರ್ನಿಯಾಗಿದ್ದ ಕಾರಣ ಈ ಎಲ್ಲಾ ಸೆಕ್ಷನ್‌ಗಳು ಹೇಳುವಂತ ಸ್ಥಾನದಲ್ಲಿ ಅರ್ಜಿದಾರರಿದ್ದಾರೆ. ಅರ್ಜಿದಾರ ಹೇಳುವಂತೆ ಇದು ಅತ್ಯಾಚಾರದ ಪ್ರಯತ್ನವಷ್ಟೇ ಹೊರತು ಅತ್ಯಾಚಾರವಲ್ಲ. ಅತ್ಯಾಚಾರ ಎನ್ನುವ ಗಂಭೀರ ಆರೋಪವನ್ನು ಪ್ರಕರಣದಲ್ಲಿ ಅನ್ವಯಿಸಲಾಗದು ಎಂದು ಅರ್ಜಿದಾರರ ಪರ ವಕೀಲರ ವಾದಕ್ಕೆ ಸೂಕ್ತ ಉತ್ತರ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಯಿಂದ ತಿಳಿದುಬರಬೇಕಿದೆ” ಎಂದು ಹೈಕೋರ್ಟ್ ಹೇಳಿದೆ.
ಮಂಗಳೂರಿನ ಕಾನೂನು ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ವಕೀಲ ಕೆ ಎಸ್ ಎನ್. ರಾಜೇಶ್ ಅವರ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಮೇಲೆ ರಾಜೇಶ್ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ನೀಡಿದ್ದರು. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ತಂದಿರುವುದು ಸೇರಿದಂತೆ ಹಲವು ಆರೋಪಗಳ ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ್ದರು. ಸದ್ಯ ಪ್ರಕರಣವು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನು ರದ್ದುಪಡಿಸಲು ಕೋರಿ ಆರೋಪಿ ರಾಜೇಶ್ ಹೈಕೋರ್ಟ್ ಗೆ ಮೊರೆ ಹೋಗಿದ್ದರು.