ಮನೆ ಕಾನೂನು ಲೈಂಗಿಕ ಕಿರುಕುಳ: ಸಾಯಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದ ಯುಪಿ ಮಹಿಳಾ ನ್ಯಾಯಾಧೀಶೆ

ಲೈಂಗಿಕ ಕಿರುಕುಳ: ಸಾಯಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದ ಯುಪಿ ಮಹಿಳಾ ನ್ಯಾಯಾಧೀಶೆ

0

ನವದೆಹಲಿ: ಹಿರಿಯ ನ್ಯಾಯಾಧೀಶರ ಲೈಂಗಿಕ ಕಿರುಕುಳದಿಂದ ರೋಸಿ ಹೋಗಿ, ತನಗೆ ಸಾಯಲು ಅನುಮತಿ” ಕೊಡಿ ಎಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಲ್ಲಿ ಉತ್ತರಪ್ರದೇಶದ ಮಹಿಳಾ ನ್ಯಾಯಾಧೀಶೆಯೊಬ್ಬರು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ವರದಿ ನೀಡುವಂತೆ ಸಿಜೆಐ ಸೂಚಿಸಿರುವುದು ವರದಿಯಾಗಿದೆ.‌

 “ನಾನು ಮಿತಿಮೀರಿದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನ್ನ ಕಸದಂತೆ ನಡೆಸಿಕೊಳ್ಳಲಾಗುತ್ತಿದೆ. ನಾನೊಂದು ನಿರುಪಯುಕ್ತ ಕೀಟ ಎಂಬಂತೆ ಭಾಸವಾಗುತ್ತಿದೆ” ಎಂಬುದಾಗಿ ನ್ಯಾಯಾಧೀಶೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ಅವರ ಸೂಚನೆ ಮೇರೆಗೆ, ಸುಪ್ರೀಂಕೋರ್ಟ್‌ ನ ಜನರಲ್‌ ಸೆಕ್ರೆಟರಿ ಅತುಲ್‌ ಎಂ.ಕುಹ್ರೇಕರ್‌ ಅವರು ಅಲಹಾಬಾದ್‌ ಹೈಕೋರ್ಟ್‌ ನ ರಿಜಿಸ್ಟ್ರಾರ್‌ ಜನರಲ್‌ ಗೆ ಪತ್ರ ಬರೆದು ಮಹಿಳಾ ಜಡ್ಜ್‌ ದೂರಿನ ಕುರಿತು ವರದಿ ನೀಡುವಂತೆ ತಿಳಿಸಿರುವುದಾಗಿ ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ಬಹಿರಂಗ ಪತ್ರದ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ನ ಹಂಗಾಮಿ ಜಸ್ಟೀಸ್‌ ಅವರಿಗೂ ಕೂಡಾ ಸೆಕ್ರೆಟರಿ ಜನರಲ್‌ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

2023ರ ಜುಲೈನಲ್ಲಿ ಮಹಿಳಾ ಜಡ್ಜ್‌ ಹೈಕೋರ್ಟ್‌ ನ ಆಂತರಿಕ ದೂರು ಸಮಿತಿಗೆ ದೂರನ್ನು ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಜಡ್ಜ್‌ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಆದರೆ ತನಿಖೆ ಕಾಟಾಚಾರಕ್ಕೆ ನಡೆಸಲಾಗಿತ್ತು. ಅದರಿಂದ ಯಾವುದೇ ಕ್ರಮ ಜರುಗಲಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ನನಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ನನಗೆ ಬದುಕುವ ಯಾವ ಇಚ್ಛೆಯೂ ಇಲ್ಲ. ಕಳೆದ ಒಂದೂವರೆ ವರ್ಷದಿಂದ ನಡೆದಾಡುವ ಶವದಂತೆ ಮಾಡಲಾಗಿದೆ. ನನಗೆ ಈ ಜೀವರಹಿತ ಶರೀರ ಬೇಕಾಗಿಲ್ಲ. ಕನಿಷ್ಠ ಪಕ್ಷ ನನಗೆ ಸಾಯಲು ಅನುಮತಿ ಕೊಡಿ” ಎಂದು ಸಿಜೆಐಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಮನವಿ ಮಾಡಲಾಗಿದೆ.