ಬೆಂಗಳೂರು : ಅಪ್ರಾಪ್ತೆ ಮೇಲೆ ಎರಡು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಆರೋಪ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ತುಮಕೂರು ಜಿಲ್ಲೆಯ ನಿವಾಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನ್ಯಾಯಪೀಠವು ವಜಾ ಮಾಡಿದೆ.
ಅಲ್ಲದೆ, ಅಪ್ರಾಪ್ತೆಯ ಕನ್ಯಾಪೊರೆ ಹಾನಿಗೊಳಗಾಗಿಲ್ಲ ಎಂದು ವೈದ್ಯಕೀಯ ವರದಿ ಹೇಳಿದೆ. ಆದರೆ, ಸಂತ್ರಸ್ತೆಯ ದೇಹದ ಮೇಲೆ ಕಚ್ಚಿದ ಗಾಯದ ಗುರುತುಗಳು ಇವೆ ಎಂದು ವೈದ್ಯರು ತಿಳಿಸಿದ್ದಾರೆ. ಆದ ಪರಿಣಾಮ ಜಾಮೀನು ನಿರಾಕರಿಸುತ್ತಿರುವುದಾಗಿ ಪೀಠ ತಿಳಿಸಿದೆ.
ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಪ್ರಕರಣದ ಸಂತ್ರಸ್ತೆಗೆ 15 ವರ್ಷ ವಯಸ್ಸಾಗಿದೆ. ಅರ್ಜಿದಾರ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಂತ್ರಸ್ತೆಯೇ ಪ್ರಮಾಣಿಕೃತ ಹೇಳಿಕೆ ಸಲ್ಲಿಸಿದ್ದಾರೆ. ಅಲ್ಲದೆ, ಅರ್ಜಿದಾರ ಹಾಗೂ ಇತರೆ ಆರೋಪಿಗಳು ನಿರಂತರವಾಗಿ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾರೆ. ಅಂತಿಮವಾಗಿ ಆಕೆಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಇದು ಗಂಭೀರ ಸ್ವರೂಪದ ಅಪರಾಧ ಕೃತ್ಯವಾಗಿದ್ದು, ವಿಚಾರಣಾ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 15 ವರ್ಷದ ಸಂತ್ರಸ್ತೆಯು 9 ನೇ ತರಗತಿ ಓದುತ್ತಿದ್ದಾಳೆ. 2023 ರ ಬೇಸಿಗೆ ರಜೆಯಲ್ಲಿ ಸಂತ್ರಸ್ತೆ ತನ್ನ ಅಜ್ಜಿಯ ಊರಿಗೆ ಹೋಗಿದ್ದರು. 2023ರ ಜೂನ್ 12 ರಂದು ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದಾಗ ಆರೋಪಿಗಳು ಆಕೆಯನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ಮೂಲಕ ಅಪಹರಿಸಿದ್ದರು. ಈ ಸಂಬಂಧ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2023 ರ ಜೂನ್ 18 ರಂದು ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಪ್ರಕರಣ ದಾಖಲಾಗುವ ಹಿಂದಿನ ಎರಡು ವರ್ಷಗಳಿಂದಲೂ ಸಂತ್ರಸ್ತೆಗೆ ಅರ್ಜಿದಾರ ಆರೋಪಿಯು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಕಂಡು ಬಂದಿತ್ತು. ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ತುಮಕೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ (ತ್ವರಿತಗತಿ-1) ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಆರೋಪಿಯು ಹೈಕೋರ್ಟ್ ಮೊರೆ ಹೋಗಿದ್ದ.