ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕೆ ಕಾರಣ ಹಲವು. ಕಾಲಿವುಡ್ ನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ನಯನತಾರಾ ಮುಂತಾದ ಸ್ಟಾರ್ ಕಲಾವಿದರು ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಂದು (ಸೆಪ್ಟೆಂಬರ್ 7) ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಮಾಸ್ ಮನರಂಜನೆ ಬಯಸುವ ಪ್ರೇಕ್ಷಕರಿಗೆ ‘ಜವಾನ್’ ಸಿನಿಮಾ ಇಷ್ಟ ಆಗುತ್ತದೆ. ಒಂದು ಕಮರ್ಷಿಯಲ್ ಕಥೆಯ ಮೂಲಕ ಜನರಿಗೆ ಸಂದೇಶ ನೀಡುವ ಕೆಲಸವೂ ಆಗಿದೆ.
‘ಜವಾನ್’ ಸಿನಿಮಾದಲ್ಲಿ ಬಾಲಿವುಡ್ ಮತ್ತು ಸೌತ್ ಸಿನಿಮಾದ ಸಂಗಮ ಆಗಿದೆ. ಕಾಲಿವುಡ್ನ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಈ ಚಿತ್ರದ ಮೇಕಿಂಗ್ ಕೂಡ ಬಹುತೇಕ ಸೌತ್ ಶೈಲಿಯಲ್ಲಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಚಾಲ್ತಿಯಲ್ಲಿರುವ ಈ ಕಾಲಘಟ್ಟವನ್ನು ಗಮನದಲ್ಲಿ ಇಟ್ಟುಕೊಂಡೇ ಅಟ್ಲಿ ಅವರು ಸ್ಕ್ರಿಪ್ಟ್ ಮಾಡಿದಂತಿದೆ. ಇದು ಬರೀ ಮೇಕಿಂಗ್ ವಿಚಾರಕ್ಕೆ ಮಾತ್ರವಲ್ಲ, ಇದರಲ್ಲಿ ಹೇಳಿರುವ ಸಂದೇಶಕ್ಕೂ ಅನ್ವಯ. ಇಡೀ ದೇಶದಲ್ಲಿ ಕಾಡುತ್ತಿರುವ ರೈತರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಎಲ್ಲಡೆ ಬೇರು ಬಿಟ್ಟಿರುವ ಭ್ರಷ್ಟಾಚಾರ ಮುಂತಾದ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಎಲ್ಲವನ್ನೂ ಪಕ್ಕಾ ಮಾಸ್ ಕಮರ್ಷಿಯಲ್ ಶೈಲಿಯಲ್ಲಿ ನಿರೂಪಿಸಲಾಗಿದೆ.
ನಟ ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾದಲ್ಲಿ ದ್ವಿಪಾತ್ರ ಮಾಡಿದ್ದಾರೆ. ಅಪ್ಪ-ಮಗನ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ನಟನೆಗಿಂತಲೂ ಹೆಚ್ಚಾಗಿ ಅವರು ಆ್ಯಕ್ಷನ್ಗೆ ಒತ್ತು ನೀಡಿದ್ದಾರೆ. ಇದು ಪಕ್ಕಾ ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಪೂರೈಸಲು ಶಾರುಖ್ ಖಾನ್ ಪ್ರಯತ್ನಿಸಿದ್ದಾರೆ. ಚಿತ್ರದುದ್ದಕ್ಕೂ ಅವರು ಹಲವು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಪ್ಪ ಮತ್ತು ಮಗನಾಗಿ ಎರಡು ಬೇರೆ ಬೇರೆ ಶೇಡ್ ನಲ್ಲಿ ಶಾರುಖ್ ಅಭಿನಯಿಸಿದ್ದಾರೆ. ಆರಂಭದ ಕೆಲವು ದೃಶ್ಯಗಳಲ್ಲಿ ವಿಲನ್ ರೀತಿ ಅಬ್ಬರಿಸುವ ಅವರು ನಂತರ ಹೀರೋಯಿಸಂ ತೋರಿಸುತ್ತಾರೆ. ಈ ರೀತಿಯ ಚಿಕ್ಕ-ಪುಟ್ಟ ಟ್ವಿಸ್ಟ್ ಗಳ ಕಾರಣದಿಂದ ಪ್ರೇಕ್ಷಕರನ್ನು ಹಿಡಿದಿರುವ ಪ್ರಯತ್ನ ಮಾಡಲಾಗಿದೆ.
ಇಡೀ ಸಿನಿಮಾದಲ್ಲಿ ಶಾರುಖ್ ಖಾನ್ ಆವರಿಸಿಕೊಂಡಿದ್ದಾರೆ. ಆದರೆ ಅವರು ಇನ್ನುಳಿದ ಕಲಾವಿದರನ್ನು ಮೂಲೆಗೆ ತಳ್ಳಿಲ್ಲ. ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿರುವ ನಯನತಾರಾ, ಖೈದಿಗಳಾಗಿ ಕಾಣಿಸಿಕೊಂಡ ಪ್ರಿಯಾಮಣಿ, ಸಾನ್ಯಾ ಮಲೋತ್ರಾ, ಫ್ಲ್ಯಾಶ್ ಬ್ಯಾಕ್ ದೃಶ್ಯಗಳಲ್ಲಿ ಬರುವ ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲರಿಗೂ ಅಗತ್ಯವಾದ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಬಂದು ಹೋದರೂ ಕೂಡ ದೀಪಿಕಾ ಪಡುಕೋಣೆ ನಿಭಾಯಿಸಿರುವ ಪಾತ್ರಕ್ಕೆ ತೂಕ ಇದೆ. ನಟ ವಿಜಯ್ ಸೇತುಪತಿ ಅವರು ಹೊಡಿಬಡಿ ದೃಶ್ಯಗಳಿಗಿಂತಲೂ ಹೆಚ್ಚಾಗಿ ಹಾವಭಾವದಲ್ಲೇ ಹೀರೋಗೆ ಟಕ್ಕರ್ ನೀಡುವ ವಿಲನ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಅವರ ಅಭಿಮಾನಿಗಳು ಬಯಸುವಷ್ಟು ತೀವ್ರತೆಯಿಂದ ಈ ಪಾತ್ರ ಮೂಡಿಬಂದಿಲ್ಲ ಎನಿಸುತ್ತದೆ. ‘ಜವಾನ್’ ಸಿನಿಮಾದಲ್ಲಿ ಸಂಜಯ್ ದತ್ ಅವರು ಒಂದು ವಿಶೇಷವಾದ ಪಾತ್ರ ಮಾಡಿದ್ದಾರೆ. ಕಥೆಯ ಒಂದು ಮಹತ್ವದ ಘಟ್ಟದಲ್ಲಿ ಅವರ ಪಾತ್ರ ಎಂಟ್ರಿ ಆಗುತ್ತದೆ. ಚೂರು ಕಾಮಿಡಿ ಮಾಡುತ್ತಾ, ಇನ್ನೂ ಒಂಚೂರು ಖಡಕ್ ಆಗಿ ನಡೆದುಕೊಳ್ಳುತ್ತಾ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ.
ಒಟ್ಟಾರೆಯಾಗಿ ‘ಜವಾನ್’ ಸಿನಿಮಾ ಬಗ್ಗೆ ಹೇಳೋದಾದರೆ ಇದು ಪಕ್ಕಾ ಶಾರುಖ್ ಖಾನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಆದರೆ ಇಲ್ಲಿ ರೊಮ್ಯಾಂಟಿಕ್ ಆದಂತಹ ಶಾರುಖ್ ಹೆಚ್ಚಾಗಿ ಕಾಣಸಿಗುವುದಿಲ್ಲ. ಆ್ಯಕ್ಷನ್ ಹೀರೋ ಆಗಿ ಅವರು ಅಬ್ಬರಿಸಿದ್ದಾರೆ. ಹೊಡಿಬಡಿ ದೃಶ್ಯಗಳ ಜೊತೆಗೆ ಒಂದಷ್ಟು ದೇಶಭಕ್ತಿ, ಫ್ಯಾಮಿಲಿ ಎಮೋಷನ್ ಮುಂತಾದ ಅಂಶಗಳನ್ನು ಬೆರೆಸುವ ಕೆಲಸ ಆಗಿದೆ. ಎಲ್ಲಿಯೂ ಬೋರ್ ಆಗದಂತೆ ಆರಂಭದಿಂದ ಕೊನೇ ತನಕ ನೋಡಿಸಿಕೊಂಡು ಹೋಗುವ ಗುಣ ಈ ಚಿತ್ರಕ್ಕಿದೆ.