ನವದೆಹಲಿ : ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವೈದ್ಯೆ ಶಾಹಿನ ಸಯೀದ್ ವಿದೇಶಕ್ಕೆ ಪರಾರಿಯಾಗಲು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ಆಕೆಯ ಪಾಸ್‌ಪೋರ್ಟ್‌ಗಾಗಿ ಪೊಲೀಸರು ಪರಿಶೀಲನೆಯನ್ನೂ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಶಾಹೀನ ಕಾರಿನಲ್ಲಿ ಅಸಾಲ್ಟ್ ರೈಫಲ್‌ಗಳು ಮತ್ತು ಇತರ ಮದ್ದುಗುಂಡುಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿತ್ತು. ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ ಐ20 ಕಾರು ಸ್ಫೋಟ ಪ್ರಕರಣದಲ್ಲಿ ಶಾಹಿನ ಕೈವಾಡದ ಬಗ್ಗೆ ತನಿಖೆ ನಡೆಯುತ್ತಿದೆ.
ದೆಹಲಿಯಲ್ಲಿ ಕಾರು ಸ್ಫೋಟದಲ್ಲಿ ಭಾಗಿಯಾಗಿದ್ದ ಶಂಕಿತ ಉಮರ್, ಶಾಹೀನ ಮತ್ತು ಮುಜಮ್ಮಿಲ್ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಶಾಹೀನ ಮತ್ತು ಮುಜಮ್ಮಿಲ್ ಬಂಧನದ ಬಳಿಕ ನ.10ರಂದು ಉಮರ್ ಕೆಂಪು ಕೋಟೆಯ ಬಳಿ ಕಾರು ಸ್ಫೋಟಿಸಿದ್ದ. ಈ ಘಟನೆಯಲ್ಲಿ 13 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದರು.
ದೆಹಲಿ ಬಳಿ ಶಂಕಿತರು ಬಾಡಿಗೆಗೆ ಪಡೆದ ಮನೆಯಲ್ಲಿ 3,000 ಕೆಜಿ ಸ್ಫೋಟಕ ಮತ್ತು ಬಾಂಬ್ ತಯಾರಿಸುವ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇನ್ನೂ ಅಲ್ ಫಲಾಹ್ ವಿಶ್ವವಿದ್ಯಾಲಯದ ಮುಜಮ್ಮಿಲ್ ಕೋಣೆಯಲ್ಲಿ ರಹಸ್ಯ ಸಭೆ ನಡೆಸಿ ದೆಹಲಿಯಲ್ಲಿ ಸ್ಫೋಟ ನಡೆಸುವ ಯೋಜನೆ ರೂಪಿಸುತ್ತಿದ್ದರು.
ಶಾಹಿನಗೆ ಜಮಾತ್-ಉಲ್-ಮೊಮಿನಾತ್‌ನ ಮಹಿಳಾ ವಿಭಾಗವನ್ನು ಭಾರತದಲ್ಲಿ ಸ್ಥಾಪಿಸುವ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಮಹಿಳೆಯರನ್ನು ನೇಮಿಸುವ ಕೆಲಸವನ್ನು ವಹಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಇನ್ನೂ ರಾಷ್ಟ್ರೀಯ ವೈದ್ಯಕೀಯ ಆಯೋಗವು ಶಾಹಿನ ನೋಂದಣಿಯನ್ನು ರದ್ದುಗೊಳಿಸಿದೆ.
ಲಕ್ನೋ ಮೂಲದ ಶಾಹೀನ ಸಯೀದ್, ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡಿದ್ದಳು. ಇದುವರೆಗಿನ ತನಿಖೆಯ ಪ್ರಕಾರ, ಸೆಪ್ಟೆಂಬರ್ 2012 ರಿಂದ ಡಿಸೆಂಬರ್ 2013 ರವರೆಗೆ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥಳಾಗಿದ್ದಳು ಎಂದು ತಿಳಿದು ಬಂದಿದೆ.















