ಬೆಳಗಾವಿ : ದಾವಣಗೆರೆ ಅಭಿವೃದ್ಧಿ ಆಗಲು ಶಾಮನೂರು ಕಾರಣ. ಶಾಮನೂರು ಶಿವಶಂಕರಪ್ಪ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ್ದಾರೆ ಎಂದು ಶಾಮನೂರು ನಿಧನಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆ ವಿಧಾನಸಭೆಯಲ್ಲಿ ಶಾಮನೂರು ಸಾಧನೆಗಳನ್ನು ಉಲ್ಲೇಖಿ ಸ್ಪೀಕರ್ ಯು.ಟಿ ಖಾದರ್ ಸಂತಾಪ ಸೂಚನೆ ನಿರ್ಣಯ ಓದಿದರು. ಬಳಿಕ ಮಾತನಾಡಿದ ಸಿಎಂ, ಶಾಮನೂರು ಶಿವಶಂಕರಪ್ಪ ನಮ್ಮ ಜೊತೆ ಮಂತ್ರಿಯಾಗಿ ಕೆಲಸ ಮಾಡಿದ್ದರು.
2016ರಲ್ಲಿ ಪುನಾರಚನೆ ಆದಾಗ ತಮ್ಮ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ ಅವರಿಗೆ ಸಚಿವ ಮಾಡಿ ಅಂತ ಬಿಟ್ಟುಕೊಟ್ಟಿದ್ದರು. ದೀರ್ಘಕಾಲ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಆಗಿದ್ದರು. ದಾವಣಗೆರೆ ನಗರಸಭೆ ಸದಸ್ಯರು, ಅಧ್ಯಕ್ಷರು ಆಗಿದ್ದರು. ತಮ್ಮ 63ನೇ ವರ್ಷದಲ್ಲಿ ಶಾಸಕ ಆದರು. ಆರು ಬಾರಿ ಶಾಸಕರು, ಒಂದು ಸಲ ಸಂಸದರು ಆಗಿ ದೀರ್ಘಕಾಲ ರಾಜಕಾಣರಣದಲ್ಲಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಶಾಮನೂರು ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕರ್ನಾಟಕದಲ್ಲಿ ದಾವಣೆಗೆರೆ ಹೆಸರಾಗಿದ್ರೆ ಅದು ಶಾಮನೂರು ಅವರ ಕೆಲಸಗಳಿಂದಾಗಿದೆ. ದಾವಣಗೆರೆಯಲ್ಲಿ ಜವಳಿ ಅವನತಿ ಪ್ರಾರಂಭವಾಗಿತ್ತು, ಆಗ ಶಾಮನೂರು ಅವರು ಜವಳಿಗೆ ಒಂದು ಬ್ರ‍್ಯಾಂಡ್ ತಂದುಕೊಟ್ಟರು. ಶಿವಶಂಕರಪ್ಪಗೆ ಯಾರೂ ವೈರಿಗಳು ಇರಲಿಲ್ಲ, ಅವರೊಬ್ಬ ಅಜಾತ ಶತ್ರು. ನಾನು ದಾವಣಗೆರೆಗೆ ಹೋದಾಗ ಅವರ ಗೆಸ್ಟ್ ಹೌಸ್‌ನಲ್ಲೇ ಇರುತ್ತಿದ್ದೆ. ಯಾವಾಗಲೂ ಅವರ ಮನೆಯಲ್ಲೇ ನನಗೆ ಊಟ. ನನಗೆ 75 ವರ್ಷ ಆದಾಗ ಅವರ ಜಿಲ್ಲೆಯಲ್ಲೇ ಜನ್ಮದಿನ ಆಚರಿಸಿಕೊಂಡಿದ್ದೆ.
ನಾನು ಜನ್ಮದಿನ ಆಚರಿಸಿಕೊಂಡಿದ್ದು ಅದೇ ಕೊನೆ. ನನಗೆ ಡೇಟ್ ಆಫ್ ಬರ್ತ್ ಗೊತ್ತಿಲ್ಲ, ನಮ್ಮ ಅಪ್ಪ ಅಮ್ಮ ಅನಕ್ಷರಸ್ಥರು, ಡೇಟ್ ಆಫ್ ಬರ್ತ್ ಬರೆದುಕೊಂಡಿರಲಿಲ್ಲ. ಶಾಮನೂರು ಅವರ ಜಾಗದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದೆ. ಶಾಮನೂರು ಅವರ ಸಹಾಯ ಹಸ್ತ ದೊಡ್ಡದು. ಅಪರೂಪದ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದೊಡ್ಡ ಕುಟುಂಬ ಅವರದ್ದು, ಲಕ್ಷಾಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ ಎಂದು ಸಂತಾಪ ಸೂಚಿಸಿದರು.
15 ದಿನಗಳ ಹಿಂದೆ ನಾನು ಆಸ್ಪತ್ರೆಗೆ ಹೋಗಿದ್ದೆ. ಆಗ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆ ಸಂದರ್ಭ ನಾನು ಅರ್ಧ ಗಂಟೆ ಇದ್ದೆ. ಇಂದು ಸದನ ಮುಂದೂಡಿಕೆ ಆಗುತ್ತದೆ ಅಂತ ಭಾವಿಸಿದ್ದೀನಿ. ಸಂತಾಪ ಆದ ಕೂಡಲೇ ನಾನು ದಾವಣಗೆರೆಗೆ ಹೋಗುತ್ತೇನೆ ಎಂದು ತಿಳಿಸಿದರು.















