‘ಷಟ್’ ಎಂದರೆ ಆರು, ‘ಮುಖ’ವೆಂದರೆ ವಂದನಗಳು. ‘‘ಷಣ್ಮುಖ’ನೆಂಬುವನು ಮಹೇಶ್ವರನ ಔರಸಪುತ್ರ. ಈ ದೇವರಿಗೆ ಆರು ಮುಖಗಳು. ’ಕಾರ್ತಿಕೇಯ’ನೆಂಬ ಅನ್ವರ್ಥನಾಮ ವುಳ್ಳ ಈತನು ದೇವಸೇನೆಯನ್ನು ತಾರಕಾಸುರನೆಂಬುವನ ಮೇಲೆ ಒಯ್ದು, ‘ಸೇನಾನಿ’ ಎಂಬ ಹೆಸರನ್ನು ಗಳಿಸಿದ ’ಮುದ್ರೆ’ ಎಂದರೆ ಒಂದು ನಿರ್ದಿಷ್ಟವಾದ ಆಕಾರವನ್ನು ತೋರುವ ಬಾಹ್ಯಭಂಗಿ.
ಈ ಭಂಗಿಗೆ ‘ಪರಾಙ್ಮುಖಮುದ್ರಾ’ (ಮುಖವನ್ನು ಹಿಂದಿರುಗಿಸುವುದು )‘ಸಾಂಭಾವೀ ಮುದ್ರಾ ’(ಶಂಭು ಅಂದರೆ ಈಶ್ವರನ ಮಗನ ಮುದ್ರೆ )ಮತ್ತು ’ಯೋನಿಮುದ್ರಾ’ ಎಂಬ ಉಪನಾಮಗಳೂ ಉಂಟು ‘ಯೋನಿ’ ಎಂದರೆ ಉತ್ಪತ್ತಿಸ್ತಾನ ಗರ್ಭಸ್ಥಾನ ಮೂಲ ಯೋಗಿಯು ಈ ಆಸನ ಮುದ್ರೆಯಲ್ಲಿದ್ದು ತನ್ನ
ಜನ್ಮದ ಮೂಲವಾವುದೆಂಬುದನ್ನು ತನ್ನೊಳಗೆ ಹುಡುಕಿ ನೋಡುವವನಾದುದರಿಂದ ಇದಕ್ಕೆ ಈ ಹೆಸರು .
ಅಭ್ಯಾಸ ಕ್ರಮ:-
1. ಮೊದಲು ಇರುವಂತೆ ‘ಪದ್ಮಾಸನ’ದಲ್ಲಿ ಕುಳಿತುಕೊಳ್ಳಬೇಕು. ಬಳಿಕ ಬೆನ್ನನ್ನು ನೇರ ಮಾಡಿ ತಲೆಯ ಮಟ್ಟಕ್ಕೆ ಸರಿಯಾಗಿ ನಿಲ್ಲಿಸಬೇಕು.
2. ಬಳಿಕ ಕೈಗಳನ್ನು ಮುಖದವರೆಗೂ ಒತ್ತಿ ಮೊಣಕೈಗಳನ್ನು ಭುಜಗಳ ಮಟ್ಟಕ್ಕೆ ತಂದು ಹೊರಗಿನ ಶಬ್ದವಾವುದನ್ನೂ ಕೇಳಬಾರದಂತೆ ಮಾಡಲು, ಕೈ ಬೆರಳುಗಳನ್ನು ಕರ್ಣ ರಂಧ್ರಗಳೊಳಗಿಡಬೇಕು. ಇದರಿಂದ ಕಿವಿಗೆ ನೋವಾಗುವುದಾದರೆ, ಹೊರ ಕಿವಿಯ ದ್ವಾರದಲ್ಲಿ ಮುಂಚಾಚಿರುವ ಭಾಗವನ್ನು ಹೆಬ್ಬೆರಳಿನಿಂದ ಕಿವಿಯ ತೂತುಗಳನ್ನು ಮುಚ್ಚಿಡಬೇಕು.
3. ಅನಂತರ ಕಣ್ಣೆವೆಗಳನ್ನು ಮುಚ್ಚಿ ಕಣ್ಣುಗಳನ್ನು ಮೇಲೆತ್ತಿ, ತೋರಬೆರಳು,ನಡು ಬೆರಳುಗಳನ್ನು ಕಣ್ಣುರೆಪ್ಪೆಗಳ ಮೇಲೆರಿಸಿ,ಆ ಬೆರಳೆಲುಬು ಗಳಿಂದ ಕಣ್ಣುಗುಡ್ಡೆಗಳನ್ನು ಎತ್ತಿಡಬೇಕು. ಆದರೆ ಕಣ್ಗು ಡ್ಡೆಯು ಮುಂಬದಿಯಲ್ಲಿ ಪಾರದರ್ಶಕ ಭಾಗವನ್ನು ಮಾತ್ರ ಒತ್ತಬಾರದು. ನಡು ಬೆರಳಿನಿಂದ ಕಣ್ಣುರೆಪ್ಪೆಗಳನ್ನು ಕೆಳಕ್ಕೆ ಜಗ್ಗಿ ಹುಬ್ಬುಗಳ ಕೆಳಭಾಗದ ಕಣ್ವೆವೆಗಳ ಮೇಲ್ಬಾಗವನ್ನು ತೋರುಬೆರಳಿಂದ ಮೇಲಕ್ಕೆ ಹಿಗ್ಗಿಸಬೇಕು. ಅಲ್ಲದೆ ಕಣ್ಣುಗಳೆರಡನ್ನು ಮೆಲ್ಲಗೆ ಒತ್ತಬೇಕು.
4. ಕಣ್ಣು ಮತ್ತು ಕಿವಿಗಳ ಮೇಲಿನ ಒತ್ತಡ ಸಮಾವಾಗಿರಬೇಕು.
5. ಉಂಗುರದ ಬೆರಳುಗಳ ತುದಿಗಳಿಂದ ಮೂಗಿನ ಹೊಳ್ಳೆಗಳನ್ನು ಸಮವಾಗಿ ಒತ್ತಬೇಕು. ಇದರಿಂದ ನಾಸಾದ್ವಾರಗಳು ಸಂಕುಚಿತವಾಗಿ ನಿಧಾನವಾದ ನೀಳವಾದ ಆದರೆ ಲಘು ವಾದ ಸಾಮರಸ್ಯದಿಂದ ಮೂಗಿನ ಹೊಳ್ಳೆಗಳ ಮೂಲಕ ಉಸಿರಾಟ ನಡೆಯಲು ಅನುಕೂಲಿಸುತ್ತದೆ.
6. ಕಿರುಬೆರಳುಗಳನ್ನು ಮೇಲ್ದುಟಿಯ ಮೇಲಿಟ್ಟು ಸಾಮರಸ್ಯದ ಉಸಿರಾಟಕ್ಕೆ ಸ್ವಲ್ಪ ತಡೆಯುಂಟು ಮಾಡಬೇಕು.
7. ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಬೇಕು
ಪರಿಣಾಮಗಳು:-
ಈ ವಿಧವಾದ ಆಸನಾಭ್ಯಾಸದಿಂದ ಇಂದ್ರಿಯವ್ಯಾಪಾರಗಳು ಒಳಮುಖವಾಗಿ ಸಾಮರಸ್ಯವಾದ ಉಸಿರಾಟವು ಮನಸ್ಸಿನ ಅಲೆದಾಟವನ್ನು ತಡೆದು ನಿಲ್ಲಿಸುತ್ತದೆ. ಇದರಿಂದ ಅಂತಶ್ಯಾಂತಿಯ ಅನುಭವ ತಲೆದೋರಿ ಅಭ್ಯಾಸಿಗೆ ದೈವಿಕವಾದ ಅಂತರ್ವಾಣಿಯು ಕೇಳಿಬರುತ್ತದೆ “ಇಲ್ಲಿ ನೋಡು;ಅಂತರ್ದೃಷ್ಟಿಯಲ್ಲಿ ತೊಡಗು ಬಹಿರ್ದೃಷ್ಟಿ ಸರ್ವಥಾ ಬೇಡ; ಏಕೆಂದರೆ ಶಾಂತಿಯ ಮೂಲವು ನಿನ್ನೊಳಗೆ ಹುದುಗಿದೆ.ಎಂಬುದೇ ಈ ಅಂತರ್ವಾಣಿ. ಈ ಆಸನದ ಭಂಗಿಯು, ಅಭ್ಯಾಸಕನನ್ನು ಯೋಗಾಂಗಗಳಲ್ಲಿ ಐದನೆಯ ಮೆಟ್ಟಿಲಾದ ‘ಪ್ರತ್ಯಾಹಾರ’ ದಲ್ಲಿ ಅಡಿಯಿಡಲು ಸಿದ್ಧಗೊಳಿಸುತ್ತದೆ. ಈ ಸ್ಥಿತಿಯಲ್ಲಿ ಅಭ್ಯಾಸಕನು ಇಂದ್ರಿಯಗಳನ್ನು ಜಯಿಸಲು ಯತ್ನಿಸಿ,ಅವುಗಳ ಕಾಮನೆಗಳನ್ನು ತಮ್ಮ ತಮ್ಮ ವಿಷಯಗಳ ಕಡೆಗೆ ಓಡದಂತೆ ತಡೆದಿಡುತ್ತಾನೆ.