ಗದಗ : ಕ್ರಿಮಿನಾಶಕ ಔಷಧ ಸಿಂಪಡಿಸಿದ ಆಹಾರ ಸೇವಿಸಿ ಸುಮಾರು 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಶಿರಗಾಂವ್ ಗ್ರಾಮದ ಸಂಚಾರಿ ಕುರಿಗಾಹಿಗಳ ಕುರಿಗಳು ಸಾವನ್ನಪ್ಪಿವೆ. ಸಾವನ್ನಪ್ಪಿದ ಕುರಿಗಳು ಪದ್ಮಣ್ಣ ಪೂಜಾರಿ, ಮಣಿ ಪೂಜಾರಿ ಹಾಗೂ ಯಲ್ಲವ್ವ ಪೂಜಾರಿ ಎಂಬವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ.
ಜಮೀನು ಅಥವಾ ಬದುವಿಗೆ ಕ್ರಿಮಿನಾಶಕ ಔಷಧ ಸಿಂಪಡಿಸಿರಬಹುದು. ಔಷಧ ಸಿಂಪಡಿಸಿದ ಹುಲ್ಲು ಸೇವಿಸಿ ಕುರಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಂಗಾಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಈ ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಪಶುವೈದ್ಯರು ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆ ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.















