ಹುಬ್ಬಳ್ಳಿ: ಶೆಟ್ಟರ್ ಅವರಿಗೆ ಯಾವುದೇ ರೀತಿಯಲ್ಲಿ ಅವಮಾನ ಮಾಡಿಲ್ಲ. ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿಲ್ಲ. ಅವರೇ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಗೆ ಹೋಗಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆಗೂಡಿ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿರುವ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಅವಕಾಶ ನೀಡಲ್ಲ ಎಂದು ಹೇಳಿದರು.
ನಿಮಗೆ ಇಷ್ಟ ಇದ್ದಾಗ ಲಿಂಗಾಯತ, ಹಿಂದುತ್ವ, ಟೋಪಿ. ಇಲ್ಲದಿದ್ದರೆ ಪಕ್ಷ ಲಿಂಗಾಯತ ವಿರೋಧಿಯಾಗಿ ಬಿಡುತ್ತದೆಯೇ? ಎಂದು ಕಿಡಿಕಾರಿದರು.
ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರು ಲಿಂಗಾಯತರಲ್ಲವೇ? ಅವರ ಪರವಾಗಿ ನೀವು ಏಕೆ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದರು.