ಮನೆ ರಾಜ್ಯ ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗವಹಿಸಲ್ಲ: ಕೆ ಎಸ್​​ ಈಶ್ವರಪ್ಪ

ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗವಹಿಸಲ್ಲ: ಕೆ ಎಸ್​​ ಈಶ್ವರಪ್ಪ

0

ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇಂದು (ಮಾ.18) ಪ್ರಧಾನಿ ನರೇಂದ್ರ ಮೋದಿಯ  ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾನು ಹೋಗಲ್ಲ ಎಂದು ಮಾಜಿ ಸಚಿವ ಕೆ ಎಸ್​​ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಬೀಳಗಿಯ ರಾಚಟೇಶ್ವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೋರಾಟ ಕುಟುಂಬ ರಾಜಕಾರಣ ‌ವಿರುದ್ಧು. ಸಿಟಿ ರವಿ, ಬಸನಗೌಡ ಪಾಟೀಲ್​ ಯತ್ನಾಳ, ನಳೀನ ಕುಮಾರ ಕಟೀಲು ಅವರಿಗೆ ಟಿಕೆಟ್ ನೀಡಿಲ್ಲ. ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧ ಮಾಡಿದರು. ಆದರೆ ಕರ್ನಾಟಕದಲ್ಲಿ ಬಿ.ಎಸ್​​ ಯಡಿಯೂರಪ್ಪ ಅವರ ಪುತ್ರನಿಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.

ಹೀಗಾಗಿ ಪಕ್ಷೇತರ ಸ್ಪರ್ಧೆ ಮಾಡಿದ್ದೇನೆ. ಗೆದ್ದು ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇನೆ. ಕೇಂದ್ರದ ನಾಯಕರು ದೂರವಾಣಿ ಸಂಪರ್ಕ ಮಾಡಿದರೂ, ಸ್ಪಷ್ಟ ನಿರ್ಧಾರ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ತಿಳಿಸಿದರು.

ಕೆಎಸ್​ ಈಶ್ವರಪ್ಪ ಅವರಿಗೆ ಸಂಘ ಪರಿವಾರದ ಪ್ರಮುಖ ಗೋಪಾಲ್​​ ಅಯೋದ್ಯೆಯಿಂದ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಕೆ ಎಸ್​ ಈಶ್ವರಪ್ಪ ಮಾತ್ರ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ನಾನು ಹಿಂದೆ ಸರಿಯಲ್ಲ ಎಂದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಮನವೊಲಿಸಲು ಮನೆಗೆ ಹೋಗಿದ್ದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಬಳಿ ಬಿಎಸ್​ ಯಡಿಯೂರಪ್ಪ ಕುಟುಂಬದ ಬಗ್ಗೆ ಕೆಎಸ್​ ಈಶ್ವರಪ್ಪ ಗರಂ ಆಗಿದ್ದರು. ಈ ಕ್ಷಣ ನನ್ನ ಮಗನಿಗೆ ಟಿಕೆಟ್ ಘೋಷಣೆ ಮಾಡಿದರೂ ನಾನು ಹಿಂದೆ ಸರಿಯಲ್ಲ. ಇಷ್ಟು ದಿನ ಯಡಿಯೂರಪ್ಪ ಆಗಿದ್ದಾಯ್ತು, ಇನ್ಮುಂದೆ ವಿಜಯೇಂದ್ರಗೆ ಕೂಡಾ ಜೈಕಾರ ಹಾಕುತ್ತಿರಬೇಕಾ? ವಿಜಯೇಂದ್ರ ಮುಂದೆ ಮುಖ್ಯಮಂತ್ರಿ ಆಗೋದನ್ನು ನಾವು ನೋಡಿಕೊಂಡು ಕೂರಬೇಕಾ? ಎಂದು ಪ್ರಶ್ನಿಸಿದ್ದಾರೆ.

ದೆಹಲಿಯವರು ಮನವೊಲಿಸುವುದಾದರೆ ಒಲಿಸಲಿ, ನಾನು ಮಾತನಾಡುವುದಿಲ್ಲ ಎಂದು ಬಿ ಎಸ್​ ಯಡಿಯೂರಪ್ಪ ಈಗಾಗಲೆ ಹೇಳಿದ್ದಾರೆ. ಈ ಮಧ್ಯೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಪುನರುಚ್ಛಾರ ಮಾಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಮತ್ತು ಹೈಕಮಾಂಡ್​ ಕೆಎಸ್​ ಈಶ್ವರಪ್ಪ ಮನವೊಲಿಕೆಯನ್ನು ಕೈ ಬಿಟ್ಟಿದೆ.