ಮನೆ ರಾಷ್ಟ್ರೀಯ ಶಿಂಜೊ ಅಬೆ ನಿಧನ: ನಾಳೆ ಭಾರತದಲ್ಲಿ ಶೋಕಾಚರಣೆ ಘೋಷಿಸಿದ ಪ್ರಧಾನಿ ಮೋದಿ

ಶಿಂಜೊ ಅಬೆ ನಿಧನ: ನಾಳೆ ಭಾರತದಲ್ಲಿ ಶೋಕಾಚರಣೆ ಘೋಷಿಸಿದ ಪ್ರಧಾನಿ ಮೋದಿ

0

ನವದೆಹಲಿ (New Delhi): ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಜುಲೈ 9) ಒಂದು ದಿನ ದೇಶದಾದ್ಯಂತ ಶೋಕಾಚರಣೆ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಒಪ್ಪಂದದ ಹಂತದಲ್ಲಿ ಭಾರತ ಮತ್ತು ಜಪಾನ್ ಬಾಂಧವ್ಯ ವೃದ್ಧಿಗೆ ಶಿಂಜೊ ಅಬೆ ಅವರ ಕೊಡುಗೆ ಅಪಾರ. ಇಂದು ಜಪಾನ್ ಜೊತೆ ಸಂಪೂರ್ಣ ಭಾರತ ಶೋಕಾಚರಣೆ ಮಾಡುತ್ತಿದೆ. ಕಠಿಣ ಸಂದರ್ಭಗಳಲ್ಲಿ ನಾವು ಜಪಾನ್‌ನ ಸಹೋದರ ಮತ್ತು ಸಹೋದರಿಯರ ಜೊತೆ ನಿಂತಿರುತ್ತೇವೆ ಎಂದಿದ್ದಾರೆ.

ಟೋಕಿಯೊದಲ್ಲಿ ನನ್ನ ಆತ್ಮೀಯ ಗೆಳೆಯ ಶಿಂಜೊ ಅಬೆ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಭಾರತ ಮತ್ತು ಜಪಾನ್ ನಡುವಿನ ಸಂಬಂಧ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯಾವಾಗಲೂ ಅವರು ಉತ್ಸುಕರಾಗಿದ್ದರು. ಇತ್ತೀಚೆಗೆ, ಭಾರತ–ಜಪಾನ್ ಅಸೋಸಿಯೇಶನ್‌ನ ಅಧ್ಯಕ್ಷರ ಹುದ್ದೆ ಅಲಂಕರಿಸಿದ್ದರು ಎಂದು ಪ್ರಧಾನಿ ಮೋದಿ ಚಿತ್ರದ ಜೊತೆ ಟ್ವೀಟ್ ಮಾಡಿದ್ದಾರೆ.

ಜಪಾನ್ ಮತ್ತು ಜಗತ್ತನ್ನು ಅತ್ಯುತ್ತಮ ಪ್ರದೇಶವನ್ನಾಗಿ ರೂಪಿಸಲು ಶಿಂಜೊ ಅಬೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಜಗತ್ತಿನ ಅತ್ಯುತ್ತಮ ರಾಜಕೀಯ ಮುತ್ಸದ್ಧಿ ಮತ್ತು ಗಮನಾರ್ಹ ಆಡಳಿತಗಾರ ಎಂದು ಮೋದಿ ಬಣ್ಣಿಸಿದ್ದಾರೆ.

ಶನಿವಾರ ರಾಷ್ಟ್ರದಾದ್ಯಂತ ತ್ರಿವರ್ಣ ಧ್ವಜವನ್ನು ಅರ್ಧಕ್ಕೆ ಇಳಿಸಲು ನಿರ್ಧರಿಸಲಾಗಿದೆ. ತ್ರಿವರ್ಣ ಧ್ವಜವಿರುವ ಎಲ್ಲ ಕಚೇರಿ, ಕಟ್ಟಡಗಳಲ್ಲಿ ಅರ್ಧಕ್ಕೆ ಇಳಿಸುವ ನಿರ್ಧಾರಕ್ಕೆ ಬರಲಾಗಿದೆ. ಮನರಂಜನೆ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಕಚೇರಿ ತಿಳಿಸಿದೆ.

ಸಿಎಂ ಬೊಮ್ಮಾಯಿ ಪ್ರವಾಸ ಮುಂದೂಡಿಕೆ

ಶನಿವಾರ ಮತ್ತು ಭಾನುವಾರಕ್ಕೆ ನಿಗದಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಪ್ರವಾಸವನ್ನು ಮುಂದೂಡಲಾಗಿದೆ.