ತುಮಕೂರು : ಏಪ್ರಿಲ್ 1 ರಂದು ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ಅಭೂತಪೂರ್ವ ಕ್ಷಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಲಿದ್ದಾರೆ. ಇನ್ನೊಂದು ಕಡೆ ಶ್ರೀಗಳ ಪುಣ್ಯ ಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸುವಂತೆ ಒತ್ತಾಯ ಕೇಳಿಬಂದಿದೆ.
ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿರುವ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಇದೇ ಏಪ್ರಿಲ್ 1ರಂದು ನಡೆಯಲಿದೆ. ಈ ಧಾರ್ಮಿಕ ಕೈಂಕರ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಲಿದ್ದಾರೆ. ಆ ದಿನ ಪ್ರಾತಃ ಕಾಲದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ವಿವಿಧ ಮಠ ಮಾನ್ಯಗಳ ಸಾಧು ಸಂತರ ಮಂತ್ರಘೋಷಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಲಿದೆ.
ರಾಷ್ಟ್ರಪತಿಗಳು ಅಂದು ಬೆಳಗ್ಗೆ 10:30ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದಾರೆ. ಆರಂಭದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಆರತಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಶ್ರೀ ಮಠದ 10 ಸಾವಿರ ವಿದ್ಯಾರ್ಥಿಗಳನ್ನು ನೋಡಿ ಚುಟುಕಾಗಿ ಮಾತನಾಡಲಿದ್ದಾರೆ. ಬಳಿಕ ಉದ್ದಾನಶ್ರೀ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿಗಳು ಕಾರ್ಯಕ್ರಮಕ್ಕೆ ಬರುವ ಹಿನ್ನೆಲೆ ಝಡ್+ ಸೆಕ್ಯೂರಿಟಿ ಇರಲಿದೆ. ಹಾಗಾಗಿ ಭಕ್ತಾದಿಗಳು ಯಾರೂ ವೇದಿಕೆ ಕಾರ್ಯಕ್ರಮಕ್ಕೆ ನೀರಿನ ಬಾಟಲ್, ಕೊಡೆಯನ್ನು ತರಬಾರದು ಎಂದು ಸಿದ್ದಲಿಂಗ ಸ್ವಾಮಿಗಳು ಮನವಿ ಮಾಡಿದ್ದಾರೆ.
ಇದರ ನಡುವೆ ಶಿವಕುಮಾರ ಶ್ರೀಗಳು ಲಿಂಗೈಕೈರಾದ ದಿನವನ್ನು ದಾಸೋಹ ದಿನವನ್ನಾಗಿ ಆಚರಣೆಗೆ ತರುವಂತೆ ಭಕ್ತಾದಿಗಳಿಂದ ಅಭಿಮತ ಬಂದಿದೆ. ಇದರಂತೆ ಕೇಂದ್ರ ಸಚಿವ ವಿ ಸೋಮಣ್ಣ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಏ.1ರಂದು ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವದಂದೇ ದಾಸೋಹ ದಿನದ ಆಚರಣೆ ಬಗ್ಗೆ ಅಧಿಕೃತ ಆದೇಶ ಹೊರಡಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.
ಶಿವಕುಮಾರ ಮಹಾ ಶಿವಯೋಗಿಗಳು ಜನವರಿ 21ರಂದು ಲಿಂಗೈಕೈರಾಗಿದ್ದು, ಆ ದಿನವನ್ನು ದಾಸೋಹ ದಿನ ಎಂದು ಆಚರಣೆ ಮಾಡಲಾಗುವುದು ಎಂದು ಅಂದಿನ ಬೊಮ್ಮಾಯಿ ಸರ್ಕಾರ ಘೋಷಣೆ ಮಾಡಿತ್ತು. ಅದು ಈವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಸ್ವಲ್ಪ ಚುಟುಕಾಗಿ ಕಾರ್ಯಕ್ರಮ ಮಾಡಲು ಮಠ ನಿರ್ಧರಿಸಿದೆ. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವ ನಿರೀಕ್ಷೆ ಇದೆ.















