ಬೆಂಗಳೂರು : ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ರೊಚ್ಚಿಗೆದ್ದು, ಬಿಜೆಪಿಯರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ವಿಪಕ್ಷಗಳ ವಿರುದ್ಧ ಅಬ್ಬರಿಸಿದ ಶಿವಲಿಂಗೇಗೌಡ ಬಿಜೆಪಿ ಸದಸ್ಯ ಶರಣು ಸಲಗಾರ್ ಸೇರಿದಂತೆ ಇತರರ ವಿರುದ್ಧ ವಾಗ್ದಾಳಿ ನಡೆಸಿದರು.
ಅಬಕಾರಿ ಹಗರಣದ ಬಗ್ಗೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಠಿಣ ಪದಗಳನ್ನ ಬಳಸಿ ಶಿವಲಿಂಗೇಗೌಡ ಅವರು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು. ಇಂತಹ ಕೆಟ್ಟ ವಿಪಕ್ಷ ನಾನು ನೋಡಿಲ್ಲ. ರೀ ಅಧ್ಯಕ್ಷರೇ ಇವ್ರನ್ನ ಹೊರಗೆ ಹಾಕ್ತಿ ನಾವು ವಿಬಿಜಿರಾಮ್‌ಜಿ ಬಗ್ಗೆ ಚರ್ಚೆ ಮಾಡೋಣ. ಇದು ಕೆಟ್ಟ ವರ್ತನೆ ಎಂದು ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಂಡರು.
ಮಿಮಿಕ್ರಿ ಮಾಡಿಸ್ತಿದ್ದೀರಾ, ಮಾನ ಮರ್ಯಾದೆ ಇಲ್ವಾ? ಕೋತಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೀಗೆ ಕೂಗಿ ಕೂಗಿ.. ʻಲೇ ಆರ್‌ಎಸ್‌ಎಸ್, ನಿಮ್ಮ ಜನ್ಮಕ್ಕೆ ಬೆಂಕಿ ಹಾಕಾ. ಕೊಬ್ಬರಿ ಬಗ್ಗೆ ಯಾರು ಹೋರಾಟ ಮಾಡಿದ್ದರು ಎಂದು ಅರಸೀಕೆರೆ ಹೋಗಿ ಕೇಳು ಎಂದು ಶರಣು ಸಲಗಾರ್ ಅವರನ್ನ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ನಾವೂ ಧರಣಿ ಮಾಡಿದ್ದೀವಿ, ಆದ್ರೆ ಹಿಂಗಾ ಧರಣಿ ಮಾಡುವುದು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಮಾತನಾಡಿ ಎಂದು ಕಿಡಿಕಾರಿದರು. ಅಲ್ಲದೇ ಶರಣು ಸಲಗಾರ್‌ಗೆ ನೀನು ಹೆಂಡ್ತಿನ ತಹಶಿಲ್ದಾರ್ ಮಾಡ್ಕೊಂಡು ಎಷ್ಟೆಷ್ಟು ದುಡ್ಡು ಹೊಡೆದಿದ್ದೀಯಾ ಅಂತ ಗೊತ್ತು ಎಂದರು.
ನಿನ್ನ ಯೋಗ್ಯತೆಗೆ… ಎಂದೆಲ್ಲಾ ಪದಗಳನ್ನ ಬಳಕೆ ಮಾಡಿ ಬಿಜೆಪಿ ಸದಸ್ಯರ ವಿರುದ್ಧ ಕಿಡಿಕಾರಿದರು. ಯಾರನ್ನೇ ಆದ್ರೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡ್ತಿದ್ದೀರಲ್ಲ, ವಿರೋಧ ಪಕ್ಷಕ್ಕೆ ಅಶೋಕ್ ನಾಲಾಯಕ್. ಇದಕ್ಕೆಲ್ಲ ನಾನು ವಿಚಲಿತನಾಗಲ್ಲ. ಇನ್ನು ನಿಮ್ಮ ಜೀವನದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿದರು. ಶಿವಲಿಂಗೇಗೌಡರು ಏಕವಚನದಲ್ಲಿ ಆರೋಪ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಪಕ್ಷದ ಸದಸ್ಯರು ಒತ್ತಾಯಿಸಿದರು.















