ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೋಮವಾರ ಚಿತ್ರದುರ್ಗದ ನ್ಯಾಯಾಲಯದ ಮುಂದೆ ಶರಣಾದರು.
ಮಧ್ಯಾಹ್ನ ಮೂರೂವರೆ ಗಂಟೆ ವೇಳೆಗೆ ಪೋಕ್ಸೊ ವಿಶೇಷ ನ್ಯಾಯಾಲಯದ ಉಸ್ತುವಾರಿಯಾಗಿರುವ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರ ಮುಂದೆ ಮುರುಘಾ ಶರಣರು ಹಾಜರಾದರು.
ಈ ವಿಚಾರವನ್ನು ದಾಖಲಿಸಿಕೊಂಡ ನ್ಯಾಯಾಧೀಶರು ಆರೋಪಿ ಸ್ವಾಮೀಜಿಯನ್ನು ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು. ಆನಂತರ ಆರೋಪಿ ಸ್ವಾಮೀಜಿಯನ್ನು ವೈದ್ಯಕೀಯ ತಪಾಸಣೆಯ ಬಳಿಕ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಇದರೊಂದಿಗೆ ಆರು ತಿಂಗಳ ಬಳಿಕ ಮತ್ತೆ ಆರೋಪಿ ಸ್ವಾಮೀಜಿ ಜೈಲು ಸೇರಿದ್ದಾರೆ. 2022ರ ಸೆಪ್ಟೆಂಬರ್‌ನಲ್ಲಿ ಬಂಧಿತರಾಗಿದ್ದ ಸ್ವಾಮೀಜಿಗೆ 2023ರ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ಸೇರಿ ಹಲವು ಷರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿತ್ತು.
ಮುರುಘಾ ಮಠದ ಹಾಸ್ಟೆಲ್‌ನಲ್ಲಿ ಇದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೋಕ್ಸೊ ಪ್ರಕರಣದ ಅಡಿ ಬಂಧಿತರಾಗಿದ್ದ ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್ ಈಚೆಗೆ ತಡೆಯಾಜ್ಞೆ ನೀಡಿತ್ತು.
“ಆರೋಪಿಯಷ್ಟೇ ಅಲ್ಲದೇ ಸಂತ್ರಸ್ತರ ದೃಷ್ಟಿಯಿಂದ ನ್ಯಾಯಯುತ ವಿಚಾರಣೆಯ ಅಗತ್ಯದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರು ವಾಸ್ತವಿಕ ಅಂಶಗಳ ಸಾಕ್ಷ್ಯ ವಿಚಾರಣೆಯ ಸಂದರ್ಭದಲ್ಲಿ ಜೈಲಿನಲ್ಲಿರುವುದು ಸೂಕ್ತ” ಎಂದು ನ್ಯಾಯಾಲಯ ಹೇಳಿತ್ತು.
ಆರೋಪಿ ಸ್ವಾಮೀಜಿಯು ಒಂದು ವಾರದಲ್ಲಿ ಪೊಲೀಸರಿಗೆ ಶರಣಾಗಬೇಕು. ಜಾಮೀನು ರದ್ದತಿ ಆದೇಶವು ನಾಲ್ಕು ತಿಂಗಳಿಗೆ ಸೀಮಿತವಾಗಿದ್ದು, ಅಗತ್ಯಬಿದ್ದಲ್ಲಿ ಮತ್ತೆರಡು ತಿಂಗಳು ವಿಸ್ತರಿಸಬಹುದಾಗಿದೆ. ವಿಚಾರಣಾಧೀನ ನ್ಯಾಯಾಲಯವು ಪಕ್ಷಕಾರರ ನಡತೆಯ ಮೇಲೆ ನಿಗಾ ಇಡಲಿದ್ದು, ಯಾವುದೇ ಪಕ್ಷಕಾರರು ಅನಗತ್ಯವಾಗಿ ವಿಚಾರಣೆ ತಡಮಾಡಿದರೆ ಅದನ್ನು ಉಲ್ಲೇಖಿಸಿ, ಅದರ ಮಾಹಿತಿಯನ್ನು ವಿಚಾರಣಾಧೀನ ನ್ಯಾಯಾಲಯವು ಸುಪ್ರೀಂ ಕೋರ್ಟ್‌ಗೆ ರವಾನಿಸಬೇಕು” ಎಂದು ಆಧೇಶದಲ್ಲಿ ಹೇಳಿದೆ. ಅಲ್ಲದೇ, ವರ್ಷದೊಳಗೆ ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಬೇಕು ಎಂದೂ ಹೇಳಿದೆ.