ಚಿತ್ರದುರ್ಗ; ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಶರಣಾದರು.
ಶರಣರಿಗೆ ಹೈಕೋರ್ಟ್ ನೀಡಿದ್ದ ಷರತ್ತು ಬದ್ಧ ಜಾಮೀನಿಗೆ ನಾಲ್ಕು ತಿಂಗಳು ತಡೆ ನೀಡಿದ ಸುಪ್ರೀಂ ಕೋರ್ಟ್, ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವಂತೆ ಏ.22ರಂದು ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಿವಮೂರ್ತಿ ಶರಣರು ಸೋಮವಾರ ಮಧ್ಯಾಹ್ನ 2.20ಕ್ಕೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದರು. ಮಧ್ಯಾಹ್ನದ ಕಲಾಪ ಆರಂಭವಾಗುವವರೆಗೆ ನ್ಯಾಯಾಲಯದ ಆವರಣದಲ್ಲಿ ಕಾಯುತ್ತ ಕುಳಿತರು.
ಹೈಕೋರ್ಟ್ 2023ರ ನ. 8ರಂದು ನೀಡಿದ್ದ ಷರತ್ತು ಬದ್ಧ ಜಾಮೀನು ಪ್ರಶ್ನಿಸಿ ಸಂತ್ರಸ್ತೆಯ ತಂದೆಯು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ವರ್ಷದೊಳಗೆ ಮುಗಿಸಲು ಗಡುವು ನೀಡಿದೆ.