ಮನೆ ಅಪರಾಧ ಹಾಸನ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ: ಹೆತ್ತ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ

ಹಾಸನ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ: ಹೆತ್ತ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ

0

ಚನ್ನರಾಯಪಟ್ಟಣ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ, ತಾಯಿಯೇ ತನ್ನ 6 ವರ್ಷದ ಮಗಳನ್ನು ನೀರಿನ ಗುಂಡಿಯಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಪತ್ತೆಯಾಗಿದೆ. ಈ ಪ್ರಕರಣ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಚ್ಚಿಬೀಳಿಸುವಂತಹ ಭಾವನಾತ್ಮಕ ಅಲೆ ಎಬ್ಬಿಸಿದೆ.

ಶ್ವೇತಾ ಎಂಬ ಮಹಿಳೆ ತನ್ನ ಮಗಳು ಸಾನ್ವಿ (6)ಯನ್ನು ತೋಟಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಇರುವ ನೀರಿನ ಗುಂಡಿಗೆ ಮಗಳನ್ನು ಇಳಿಸಿ, ಕಾಲಿನಿಂದ ತುಳಿದು ಹತ್ಯೆ ಮಾಡಿದ್ದಾಳೆ. ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಒಂದು ಸಣ್ಣ ಗುಂಡಿನಲ್ಲಿ ಸಾನ್ವಿಯ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

ಶ್ವೇತಾ ಹಾಗೂ ಶಿವಮೊಗ್ಗ ಮೂಲದ ರಘು 2018ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಕೆಲವೇ ವರ್ಷಗಳಲ್ಲಿ ದಂಪತಿಯ ನಡುವೆ ಕಲಹಗಳು ಉಂಟಾಗಿ, ಶ್ವೇತಾ ತನ್ನ ಪತಿಯಿಂದ ದೂರವಿದ್ದಳು. ವಿಚಾರಣೆಯ ಪ್ರಕಾರ, ಕಳೆದ ನಾಲ್ಕು ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ವಿಚ್ಛೇದನದ ಅರ್ಜಿ ಕೂಡಾ ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ವೇತಾ ಅವರ ಮಗಳ ಆರೈಕೆಯ ಜವಾಬ್ದಾರಿಯನ್ನು ರಘುವಿನ ಪೋಷಕರಿಗೆ ವಹಿಸಲಾಗಿತ್ತು. ಶನಿವಾರ ಶ್ವೇತಾ ತನ್ನ ಮಗಳನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದು, ಗಂಡ ಮಗಳನ್ನು ಪುನಃ ಕರೆದುಕೊಂಡು ಹೋಗಬಾರದೆಂಬ ದೃಷ್ಟಿಯಿಂದ ಈ ಕೃತ್ಯವೆಸಗಿದ್ದಾಳೆ ಎಂದು ಗ್ರಾಮಸ್ಥರ ಮುಂದೆ ಶ್ವೇತಾ ಹೇಳಿರುವುದಾಗಿ ವರದಿಯಾಗಿದೆ.

ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣ ಹಾಸನ ಜಿಲ್ಲಾ ಎಸ್‌ಪಿ ಮೊಹಮ್ಮದ್ ಸುಜಿತಾ, ಡಿವೈಎಸ್‌ಪಿ ಕುಮಾರ್ ಹಾಗೂ ಸಿಪಿಐ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವೇತಾವನ್ನು ಈಗಾಗಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.