ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಗುಂಡಿನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ವಿಭಾಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೋಮವಾರ (ಏ.15 ರಂದು) ಗುಜರಾತ್ನ ಭುಜ್ ನಲ್ಲಿ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಸಿಹಿ ಮೂಲದ ವಿಕ್ಕಿ ಸಾಹಬ್ ಗುಪ್ತಾ (24) ಮತ್ತು ಸಾಗರ್ ಶ್ರೀಜೋಗೇಂದ್ರ ಪಾಲ್ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮಂಗಳವಾರ ಬೆಳಿಗ್ಗೆ ಮುಂಬೈಗೆ ಕರೆತರಲಾಗುವುದು ಎಂದು ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನ ಹೊರಗೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಗುಂಡಿನ ದಾಳಿ ನಡೆದಾಗ ಸಲ್ಮಾನ್ ಖಾನ್ ಅವರು ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ.
ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಘಟನೆಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ಹೇಳಿದ್ದಾರೆ.
ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ವಾಂಟೆಡ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹಲವಾರು ಬೆದರಿಕೆಯನ್ನು ಹಾಕಿದ್ದಾರೆ. ಮೂಲಗಳ ಪ್ರಕಾರ ನಟನನ್ನು ಕೊಲ್ಲಲು ಬಿಷ್ಣೋಯಿ ಮತ್ತು ಬ್ರಾರ್ ತಮ್ಮ ಶೂಟರ್ಗಳನ್ನು ಮುಂಬೈಗೆ ಕಳುಹಿಸಿದ್ದರು ಎಂದು ವರದಿಯಾಗಿದೆ.