ಮನೆ ಮನರಂಜನೆ ನಟಿ ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ ಪ್ರಕರಣ – ಆರೋಪಿಯನ್ನು ಬಂಧಿಸಿದ ಪೊಲೀಸರು

ನಟಿ ದಿಶಾ ಪಟಾನಿ ಮನೆ ಮುಂದೆ ಗುಂಡಿನ ದಾಳಿ ಪ್ರಕರಣ – ಆರೋಪಿಯನ್ನು ಬಂಧಿಸಿದ ಪೊಲೀಸರು

0

ಲಕ್ನೋ : ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ ನಡೆಸಿದ್ದ 5ನೇ ಶಂಕಿತ ಆರೋಪಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಶಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಬರೇಲಿಯ ಸಮೀಪದ ಅರಣ್ಯದಲ್ಲಿ ಈ ಎನ್‌ಕೌಂಟರ್‌ ನಡೆದಿದೆ.

ರಾಜಸ್ಥಾನದ ಬೇಡ್ಕಲಾ ಗ್ರಾಮದ ನಿವಾಸಿ ರಾಮ್‌ನಿವಾಸ್ ಅಲಿಯಾಸ್ ದೀಪಕ್ (19) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಒಂದು ಪಿಸ್ತೂಲ್, ನಾಲ್ಕು ಕಾರ್ಟ್ರಿಡ್ಜ್‌ಗಳು, ನಾಲ್ಕು ಖಾಲಿ ಕಾರ್ಟ್ರಿಡ್ಜ್‌ಗಳು ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್‌ ಒಂದನ್ನು ವಶಪಡಿಸಿಕೊಂಡಿದ್ದಾರೆ. ಈತನ ಸುಳಿವು ನೀಡಿದವರಿಗೆ 25,000 ರೂ. ಬಹುಮಾನ ಘೋಷಿಸಲಾಗಿತ್ತು.

ಸೆಪ್ಟೆಂಬರ್ 12 ರಂದು ಬೆಳಗಿನ ಜಾವ 3:45 ರ ಸುಮಾರಿಗೆ ನಟಿಯ ಮನೆಯ ಬಳಿ ಇಬ್ಬರು ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣದ ಇಬ್ಬರು ಆರೋಪಿಗಳನ್ನು ಬುಧವಾರ ಗಾಜಿಯಾಬಾದ್‌ನಲ್ಲಿ ಪೊಲೀಸರು ಎನ್‌ಕೌಂಟರ್‌ ನಡೆಸಿ ಹತ್ಯೆಗೈದಿದ್ದರು. ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರನ್ನು ದೆಹಲಿ ಪೊಲೀಸರು ಶುಕ್ರವಾರ ಮುಂಜಾನೆ ಬಂಧಿಸಿದ್ದರು.

ದುಷ್ಕರ್ಮಿಗಳ ದಾಳಿಯ ಬಗ್ಗೆ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಅಮಿತಾಭ್ ಯಶ್ ಪ್ರತಿಕ್ರಿಯಿಸಿದ್ದು, ಗುಂಡಿನ ದಾಳಿಯನ್ನು ನಮ್ಮ ಪೊಲೀಸರು ಸವಾಲಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.