ಕೋಲಾರ(Kolar): ಕೋಲಾರದಲ್ಲಿ ಬೆಳ್ಳಂಬೆಳಿಗ್ಗೆಯೇ ಗುಂಡಿನ ಸದ್ದು ಕೇಳಿಬಂದಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ಶುಕ್ರವಾರ ತಾಲ್ಲೂಕಿನ ಚೆಲುವನಹಳ್ಳಿ ಅರಣ್ಯ ಪ್ರದೇಶದ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.
ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಸುಪಾರಿ ಕಿಲ್ಲರ್ ಬಾಲಾಜಿ ಸಿಂಗ್ ಕಾಲಿಗೆ ಗುಂಡು ಹೊಡೆದು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಮುಳಬಾಗಿಲು ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಈ ಫೈರಿಂಗ್ ನಡೆದಿದೆ.
ಇನ್ ಸ್ಪೆಕ್ಟರ್ ಲಕ್ಷ್ಮೀಕಾಂತ್ ಘಟನೆ ಕುರಿತು ಮಾಹಿತಿ ನೀಡಿದ್ದು, ಆರೋಪಿ ಅಡಗಿರುವ ಮಾಹಿತಿ ಮೇರೆಗೆ ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಬಾಲಾಜಿ ಸಿಂಗ್ ಬಲಗಾಲಿಗೆ ಗುಂಡು ಬಿದ್ದಿದ್ದು, ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಿಗ್ಗೆ 6 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದೆವು. ಈ ಸಂದರ್ಭದಲ್ಲಿ ಮೂತ್ರಕ್ಕೆ ಹೋಗುವುದಾಗಿ ಹೇಳಿ ಪೊಲೀಸರಿಂದ ಕೈಬಿಡಿಸಿಕೊಂಡ. ಆತನನ್ನು ಹಿಡಿದುಕೊಳ್ಳಲು ಮುಂದಾದ ಪೊಲೀಸ್ ಗೆ ಕಲ್ಲು ಬೀಸಿ ಓಡಿದ. ಈ ಸಂದರ್ಭದಲ್ಲಿ ಫೈರಿಂಗ್ ನಡೆಸಿದೆವು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್, ಡಿವೈಎಸ್ಪಿ ಜೈ ಶಂಕರ್ ಭೇಟಿ ನೀಡಿದ್ದಾರೆ.