ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ನಿಧಿ ಒದಗಿಸುವುದಕ್ಕೆ ಸಮ್ಮತಿಸುವ ವಿವಾದಾತ್ಮಕ ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿರುವ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಎಂದು ಪರಿಶೀಲಿಸಲು ಏಪ್ರಿಲ್ 11ರಂದು ಪ್ರಕರಣ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಪ್ರಕರಣಕ್ಕೆ ಸಾಂವಿಧಾನಿಕ ಪ್ರಾಮುಖ್ಯತೆ ಇದ್ದು ದೇಶದಲ್ಲಿ ಪ್ರಜಾಸತ್ತಾತ್ಮಕ ರಾಜಕಾರಣದ ಮೇಲೆ ಪರಿಣಾಮ ಬೀರಬಹುದು ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ಈ ನಿರ್ದೇಶನ ನೀಡಿತು.
ಇದು ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ರಾಜ್ಯಾಡಳಿತ ಮತ್ತು ಅವುಗಳಿಗೆ ಒದಗಿಸುವ ನಿಧಿಯ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ. ನ್ಯಾಯಾಲಯದ ಅಧಿಕೃತ ತೀರ್ಪಿಗೆ ಇದು ಅರ್ಹವಾಗಿರುವುದರಿಂದ ಪ್ರಕರಣವನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲು ಇದು ಅರ್ಹವಾಗಿದೆ ಎಂದು ವಕೀಲ ಶಾದನ್ ಫರಾಸತ್ ಹೇಳಿದರು.
ಈ ಹಂತದಲ್ಲಿ ಪೀಠ “ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಎಂದು ಪರಿಶೀಲಿಸಲು ಏಪ್ರಿಲ್ 11ರಂದು ಪ್ರಕರಣವನ್ನು ಆಲಿಸಲಿದ್ದೇವೆ” ಎಂದಿತು.
ಚುನಾವಣಾ ಬಾಂಡ್ ಗಳು ಭರವಸೆಯ ಪತ್ರ ಇಲ್ಲವೇ ಬೇರರ್ ಬಾಂಡ್’ನಂತಿದ್ದು ಇದನ್ನು ಯಾವುದೇ ಭಾರತೀಯ ಪ್ರಜೆ ಅಥವಾ ಕಂಪನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಖರೀದಿಸಬಹುದು. ಈ ಬಾಂಡ್’ಗಳನ್ನು ಪ್ರಜೆಗಳು ಅಥವಾ ಕಾರ್ಪೊರೇಟ್ಗಳು ತಾವು ಬಯಸಿದ ಯಾವುದೇ ರಾಜಕೀಯ ಪಕ್ಷಕ್ಕೆ ದಾನ ಮಾಡಬಹುದಾಗಿದೆ.
ವಿಚಾರಣೆ ವೇಳೆ ಹಿರಿಯ ವಕೀಲ ದುಶ್ಯಂತ್ ದವೆ ಅವರು, ಇದೊಂದು ಅತ್ಯಂತ ಮಹತ್ವದ ಪ್ರಕರಣವಾಗಿದ್ದು, ಆದಷ್ಟು ಬೇಗ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಆಗ ಸಂಯೋಜಿತ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರ ಸಮಯ ಕೇಳಿತು.
“ನಾವೀಗ ಕರ್ನಾಟಕದ ಚುನಾವಣೆಗಾಗಿ ಕಾಯಬೇಕೆ? ಹಾಗೆ ಮಾಡಿದರೆ ಮತ್ತೊಂದು ಹಂತದ ಚುನಾವಣಾ ಬಾಂಡ್ ನೀಡುತ್ತಾರೆ” ಎಂದು ದವೆ ಹೇಳಿದರು.
ನಂತರ ಪೀಠ ಅಂತಿಮ ವಿಲೇವಾರಿಗಾಗಿ ಮೇ 2ರಂದು ಪ್ರಕರಣ ಪಟ್ಟಿ ಮಾಡುವುದಾಗಿ ಹೇಳಿತು. ಆಗ ವಕೀಲ ಫರಸತ್ ಅವರು ಪ್ರಕರಣವನ್ನು ಸಾಂವಿಧಾನಿಕ ಪೀಠ ಪರಿಗಣಿಸಬೇಕಾಗಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪೀಠ ಪ್ರಕರಣವನ್ನು ಏ. 11ಕ್ಕೆ ಪಟ್ಟಿ ಮಾಡಿತು.