ಬೆಳಗಾವಿ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಸಿಎಂ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರು “ಕುಂಭಮೇಳದಲ್ಲೂ ಸಹ ಕಾಲ್ತುಳಿತ ನಡೆದಿತ್ತು, ಅದರ ಬಗ್ಗೆ ನಾನು ಮಾತಾಡಿಲ್ಲ” ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, “ಅಲ್ಲಿ ಸತ್ತಿದ್ದಾರೆ ಅಂತ ಇಲ್ಲೂ ಸಾಯ್ಬೇಕಾ?” ಎಂದು ಪ್ರಶ್ನಿಸಿದ್ದಾರೆ.
“ಕಾಲ್ತುಳಿತ ಒಂದು ದುರದೃಷ್ಟಕರ ಘಟನೆ. ಇದನ್ನು ಕುಂಭಮೇಳದ ಘಟನೆಯೊಡನೆ ಹೋಲಿಸಬಾರದು. ಸಿದ್ದರಾಮಯ್ಯನವರ ಈ ಹೇಳಿಕೆ ಜನರ ಪ್ರಾಣದ ಮೇಲಿನ ನಿರ್ಲಕ್ಷ್ಯವನ್ನ ಬಿಂಬಿಸುತ್ತದೆ.”
ಮುತಾಲಿಕ್ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನೂ ಉದ್ದೇಶಿಸಿ, “ಈ ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ನೆಲೆಯಾಗಿದೆ. ರಸ್ತೆ ಗುಂಡಿಗಳ ವಿಷಯದಲ್ಲಿ ಬೇರೆ ಪಕ್ಷದವರನ್ನು ಟೀಕಿಸುವ ಮುನ್ನ, ತಮ್ಮ ಆಡಳಿತದ ಎಡವಟ್ಟಿಗೂ ಉತ್ತರ ಕೊಡಿ” ಎಂದರು. ಅವರು ಸಿದ್ದರಾಮಯ್ಯನವರಿಗೆ ನೇರವಾಗಿ ತಿರುಗೇಟು ನೀಡುತ್ತಾ, “ತಪ್ಪು ಮಾಡಿದ್ದೀರಾ ಅಂತ ಒಪ್ಪಿಕೊಳ್ಳಿ, ಜನರ ಬಳಿ ಕ್ಷಮೆ ಕೇಳಿ. ಅಲ್ಲಿ ಸತ್ತಿದ್ದಾರೆ, ಇಲ್ಲಿ ಸತ್ತರೂ ಏನು ಎಂಬ ಧೋರಣೆ ಸರಿಯಲ್ಲ” ಎಂದಿದ್ದಾರೆ.
ಘಟನೆಯಾದ ಬೆನ್ನಲ್ಲೇ ವಿಜಯೋತ್ಸವ ನಡೆಸಿದುದನ್ನು ಮುತಾಲಿಕ್ ಕಟುವಾಗಿ ಟೀಕಿಸಿದ್ದಾರೆ. ಘಟನೆಯಾದ ಸಂದರ್ಭದಲ್ಲಿಯೇ ವಿಜಯೋತ್ಸವ ನಡೆದಿದೆ. ತಕ್ಷಣ ವಿಜಯೋತ್ಸವವನ್ನು ನಿಲ್ಲಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಕ್ರಿಕೆಟ್ ಆಟಗಾರರು ಮತ್ತು ಆಯೋಜಕರು ಕೋಟಿ ಕೋಟಿ ರೂಪಾಯಿ ಗಳಿಸುತ್ತಿರುವದನ್ನು ಮುತಾಲಿಕ್ ಪ್ರಸ್ತಾಪಿಸಿದ್ದು, “ಅಭಿಮಾನಿಗಳಿಂದಲೇ ಕೋಟಿಗಟ್ಟಲೆ ಹಣ ಗಳಿಸುತ್ತೀರಿ. ಆದರೆ ಅವರ ಸಾವಿಗೆ ₹10 ಲಕ್ಷ? ಕನಿಷ್ಠ ₹1 ಕೋಟಿ ಪರಿಹಾರ ನೀಡಬೇಕಿತ್ತು” ಎಂದು ಆಗ್ರಹಿಸಿದ್ದಾರೆ.














