ಮನೆ ಕಾನೂನು ಶ್ರದ್ಧಾ ಹತ್ಯೆ ಪ್ರಕರಣ: ಅಫ್ತಾಬ್ ವಿರುದ್ಧದ ತನಿಖೆ ಸಿಬಿಐಗೆ ವರ್ಗಾಯಿಸುವಂತೆ ಕೋರಿ ದೆಹಲಿ ಹೈಕೋರ್ಟ್’ಗೆ ಪಿಐಎಲ್

ಶ್ರದ್ಧಾ ಹತ್ಯೆ ಪ್ರಕರಣ: ಅಫ್ತಾಬ್ ವಿರುದ್ಧದ ತನಿಖೆ ಸಿಬಿಐಗೆ ವರ್ಗಾಯಿಸುವಂತೆ ಕೋರಿ ದೆಹಲಿ ಹೈಕೋರ್ಟ್’ಗೆ ಪಿಐಎಲ್

0

ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಕರ್ಳನ್ನು 35 ತುಂಡುಗಳಾಗಿ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ದೆಹಲಿ ಹೈಕೋರ್ಟ್’ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

 [ಜೋಶಿನಿ ತುಲಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಇದುವರೆಗೆ ದೆಹಲಿ ಪೊಲೀಸರು ತಾವು ಕೈಗೊಂಡ ತನಿಖೆಯ ಪ್ರತಿಯೊಂದು ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾನೂನಿನ ಪ್ರಕಾರ ಅನುಮತಿ ಇಲ್ಲ ಎಂದು ನ್ಯಾಯವಾದಿ ಜೋಶಿನಿ ತುಲಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

• ಸಾಕ್ಷ್ಯ ಸಂಗ್ರಹಿಸಲಾದ ಸ್ಥಳದಲ್ಲಿ ಮಾಧ್ಯಮಗಳು ಮತ್ತು ಇತರೆ ಸಾರ್ವಜನಿಕ ವ್ಯಕ್ತಿಗಳು ಇದ್ದುದರಿಂದ ಅದು ಸಾಕ್ಷ್ಯ ಮತ್ತು ಸಾಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ.

• ತಾನು ನ್ಯಾಯಾಲಯದಲ್ಲಿ ಕೋರಿರುವ ಪರಿಹಾರ ಆರೋಪಿಗಳು, ದೂರುದಾರರು ಮತ್ತು ದೆಹಲಿಯ ನಾಗರಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯೇ ಹೊರತು ಯಾವುದೇ ಇತರ ವ್ಯಕ್ತಿ, ಸಂಘ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲ.

• ಘಟನೆ ಸುಮಾರು 6 ತಿಂಗಳ ಹಿಂದೆ ಮೇ, 2022 ರಲ್ಲಿ ನಡೆದಿದ್ದು ನಂತರ ಮೃತಳ ದೇಹದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಬಿಸಾಡಿರುವುದರಿಂದ ಸಿಬ್ಬಂದಿ ಮತ್ತು ತಾಂತ್ರಿಕ ಸಲಕರಣೆಗಳ ಕೊರತೆಯಿಂದಾಗಿ ಮೆಹ್ರೌಲಿ ಪೊಲೀಸ್ ಠಾಣೆ ತನಿಖೆ ನಡೆಸಲು ಸಜ್ಜಾಗಿರಲಿಲ್ಲ.

• ಆರೋಪಿಯನ್ನು ತನಿಖೆ ನಡೆಸುವ ಸಲುವಾಗಿ ಐದು ಬೇರೆ ಬೇರೆ ರಾಜ್ಯಗಳಿಗೆ ಕರೆದೊಯ್ಯುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಹೀಗಾಗಿ ಪ್ರಕರಣ ಅಂತರ ರಾಜ್ಯ ವ್ಯಾಪ್ತಿ ಹೊಂದಿದ್ದು ದೆಹಲಿ ಪೊಲೀಸರ ಪ್ರಾದೇಶಿಕ ವ್ಯಾಪ್ತಿ ಮೀರಿದೆ.

ಬಂಬಲ್ ಡೇಟಿಂಗ್ ಅಪ್ಲಿಕೇಷನ್ ಮೂಲಕ  ಭೇಟಿಯಾದ ಅಫ್ತಾಬ್- ಶ್ರದ್ಧಾ ಜೋಡಿ ಸಹ ಜೀವನ (ಲಿವ್ ಇನ್) ನಡೆಸುತ್ತಿತ್ತು. ಅವರು ಮುಂಬೈ ನಗರದವರಾಗಿದ್ದು ಈ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಪೊಲೀಸರ ಪ್ರಕಾರ, ಈ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್’ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್ನಲ್ಲಿ ಸಂಗ್ರಹಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ.